ಹೆಣ್ಣು ಭಾವನಾತ್ಮಕವಾಗಿ ದೇವತೆ ಎಂದು ಕರೆಸಿಕೊಳ್ಳುವ ಜೀವಿಯಲ್ಲ: ಡಾ.ರೇಖಾ ಬನ್ನಾಡಿ

ಉಡುಪಿ, ಮಾ.9: ಹೆಣ್ಣು ಉತ್ಪ್ರೇಕ್ಷೆಯಲ್ಲ ಅಥವಾ ಭಾವನಾತ್ಮಕವಾಗಿ ದೇವತೆ ಎಂದು ಕರೆಸಿಕೊಳ್ಳುವ ಜೀವಿಯಲ್ಲ. ಗೌರವಾನ್ವಿತ ಹುದ್ದೆಯಲ್ಲಿರುವ ಪ್ರಭಾವಶಾಲಿ ವ್ಯಕ್ತಿಗಳಿಂದ ಕೂಡ ಹೆಣ್ಣಿನ ಮೇಲೆ ನಿರಂತರ ನಡೆಯುವ ದೌರ್ಜನ್ಯ ಮತ್ತು ಶೋಷಣೆಗಳು ಸೂಕ್ಷ್ಮತೆ ಇರುವವರಿಗೆ ಸಂಕಟ ತರುವ ವಿಷಯಗಳು ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ರೇಖಾ ವಿ.ಬನ್ನಾಡಿ ಹೇಳಿದ್ದಾರೆ.
ಉಡುಪಿಯ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಮಹಿಳಾ ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಶನಿವಾರ ನಡೆದ ಮಹಿಳೆ ಮತ್ತು ಸಮಾಜ: ಒಂದು ಅವಲೋಕನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹೆಣ್ಣಿನ ದೇಹದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡದೆ, ಪ್ರತಿಭೆಯನ್ನು ಗುರುತಿಸಿ, ಹೆಣ್ಣಿನ ಒಳಗಿರುವ ಸಹನೆಯನ್ನು, ಧೀಶಕ್ತಿಯನ್ನು, ಆತ್ಮಸ್ಥೈರ್ಯವನ್ನು ಗೌರವಿಸುವ, ಪ್ರೋತ್ಸಾಹ ಮತ್ತು ಪ್ರೇರಣೆ ಕೊಡು ವಂತ ಕೆಲಸಗಳಾಗಬೇಕು. ಆಗ ಮಾತ್ರ ಮಹಿಳಾ ದಿನಾಚರಣೆಯನ್ನು ಪ್ರತಿಯೊಬ್ಬ ಹೆಣ್ಣು ಸಂಭ್ರಮದಿಂದ ಆಚರಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿಭಾಗದ ಡೀನ್ ಡಾ.ನಿಕೇತನ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಡುಕೋಣೆಯ ಸಹ ಶಿಕ್ಷಕಿ ನಾಗರತ್ನ ಜಿ. ‘ಸ್ತ್ರೀ ಸಬಲೀಕರಣ’ ಹಾಗೂ ರೇಡಿಯೋ ಕುಂದಾಪುರದ ಕಾರ್ಯನಿರ್ವಾಹಕಿ ಜ್ಯೋತಿ ವಿ.ಅಲ್ಸೆ ‘ಆಧುನಿಕ ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದಲ್ಲಿ ಮಾತನಾಡಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶದ ಸಂಚಾಲಕಿ ಡಾ.ಶ್ರೀಮತಿ ಅಡಿಗ ಪ್ರಾಸ್ತಾ ವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಹಿಳಾ ಸಂಘದ ಸಂಚಾಲಕಿ ಜಯಮಂಗಳ ವಂದಿಸಿದರು. ವಿದ್ಯಾರ್ಥಿನಿ ಶ್ರಿರತ್ನ ಕಾರ್ಯಕ್ರಮ ನಿರ್ವಹಿಸಿದರು.







