ಅದಾನಿ ಫೌಂಡೇಶನ್: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಪಡುಬಿದ್ರಿ: ಇಲ್ಲಿನ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‍ಆರ್ ಯೋಜನೆಯಡಿ ಭಾನುವಾರ ಸ್ಥಾವರದ ಸುತ್ತಮುತ್ತಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪಡುಬಿದ್ರಿಯ ಬಂಟರ ಭವನದ ಸಭಾಂಗಣದಲ್ಲಿ ವಿತರಿಸಿತು.
ಅಧ್ಯಕ್ಷತೆ ವಹಿಸಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಅದಾನಿ ಪವರ್ ಲಿಮಿಟೆಡ್ ಅದಾನಿ ಫೌಂಡೇಷನ್‍ನ ಸಹಯೋಗದೊಂದಿಗೆ ಸಿಎಸ್‍ಅರ್ ಯೋಜನೆಯಡಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳನ್ನು ಪ್ರತಿ ವರ್ಷಹಮ್ಮಿಕೊಂಡು ಬರುತ್ತಿದೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಲೆಸಿರುವ 846 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಒಟ್ಟು ರೂ. 20 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸ್ಥಾವರದ ನೆರೆ ಪಂಚಾಯತ್‍ಗಳ ಮುಖೇನ ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ಕಿಶೋರ್ ಆಳ್ವ ಅವರು ಹೇಳಿದರು.
ಅದಾನಿ ಫೌಂಡೇಶನ್‍ನ ಸಿಎಸ್‍ಆರ್ ಚಟುವಟಿಕೆಗಳಲ್ಲಿ ಶಿಕ್ಷಣವು ಒಂದು ಪ್ರಮುಖ ಕ್ಷೇತ್ರವಾಗಿದೆ. ಅನರಕ್ಷತೆಯ ನಿರ್ಮೂಲನೆ ಮತ್ತು ಸಮಾಜದ ಗ್ರಾಮೀಣ ಭಾಗಗಳಿಗೆ ಶಿಕ್ಷಣವನ್ನು ಉತ್ತೇಜಿಸುವತ್ತ ಅದಾನಿ ಫೌಂಡೇಶನ್ ಗಮನಹರಿಸುತ್ತಿದೆ. ಅದಾನಿ ಉಡುಪಿ ಸ್ಥಾವರದ ಒಟ್ಟು ಸಿಎಸ್‍ಆರ್ ಅನುದಾನ ದಲ್ಲಿ ಶೇ.16ರಷ್ಟು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಅದಾನಿ ಸಂಸ್ಥೆಯ ಸಿಎಸ್‍ಆರ್ ಯೋಜನೆಯಡಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿ ಶಿಕ್ಷಣದ ಮಹತ್ವದ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿವೇತನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆಯಾಗಿದೆ. ಇದು ವಿದ್ಯಾರ್ಥಿ ಸ್ನೇಹ ಹಾಗೂ ಭಾವನಾತ್ಮಕ ಕಾರ್ಯಕ್ರಮ. ಈಗಿನ ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯುವು ದರ ಜೊತೆಗೆ ಆಂತರಿಕವಾಗಿ ಗಟ್ಟಿಯಾಗಿ, ಒಳ್ಳೆಯ ಸಂಸ್ಕೃತಿಯನ್ನು ಕಲಿತು ದುಶ್ಚಟದಿಂದ ದೂರವಿದ್ದು, ಪೊಷಕರಿಗೆ ಹಾಗೂ ಸಮಾಜಕ್ಕೆ ನೆರವಾಗ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ರವಿರಾಜ್ ರಾವ್ ಎಲ್ಲೂರು, ಸೌಮ್ಯಲತಾ ಶೆಟ್ಟಿ ಪಲಿಮಾರು, ಶಿವಕುಮಾರ್ ಮೆಂಡನ್ ಬಡಾ, ಮಮತಾ ದಿವಾಕರ್ ಪೂಂಜಾ ಬಳ್ಕುಂಜೆ, ಪ್ರಸಾದ್ ಶೆಟ್ಟಿ ಮಜೂರು, ಜನಾರ್ಧನ ಆಚಾರ್ಯ ಕುತ್ಯಾರು, ಸುರೇಖ ತೆಂಕ, ಪಡುಬಿದ್ರಿ ಗ್ರಾಮ ಪಂಚಾಯತ್‍ಉಪಾಧ್ಯಕ್ಷ ಹೇಮಚಂದ್ರ ಸಾಲಿಯನ್, ಅದಾನಿ ಫೌಂಡೇಶನ್‍ನ ಸಿಬ್ಬಂಧಿ ವರ್ಗದವರಾದ ಅನುದೀಪ್, ಶುಭ ಮಂಗಳ, ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಏಜಿಎಂ ರವಿ ಆರ್. ಜೇರೆ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.







