ಅಂತರ್ ಧರ್ಮೀಯ ವಿವಾಹದಿಂದ ಹಿಂದೂತ್ವಕ್ಕೆ ಧಕ್ಕೆಯಾಗುವುದಿಲ್ಲವೇ: ರಮೇಶ್ ಕಾಂಚನ್ ಪ್ರಶ್ನೆ

ಉಡುಪಿ, ಮಾ.11: ಸ್ವಯಂಘೋಷಿತ ಹಿಂದೂ ಮುಖಂಡರಾಗಿ, ದ್ವೇಷಪೂರಿತ ಭಾಷಣದ ಮೂಲಕ ಐಷಾರಾಮಿ ಜೀವನ ನಡೆಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನ ಧಾರ್ಮಿಕ ಕಾರ್ಯ ಕ್ರಮ ವೊಂದರಲ್ಲಿ ಅನ್ಯಧರ್ಮದ ಹುಡುಗಿಯರನ್ನು ಪ್ರೀತಿಸಿ ವಿವಾಹವಾಗಿ ಎಂದು ನೀಡಿರುವ ಕರೆಯಂತೆ ಹಿಂದೂ ಯುವಕರು ನಡೆದುಕೊಂಡರೆ ಹಿಂದೂತ್ವಕ್ಕೆ ಧಕ್ಕೆಯಾಗುವುದಿಲ್ಲವೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಅನ್ಯಧರ್ಮೀಯರನ್ನು ದೂಷಿಸುವವರು, ಅವರ ಮೇಲೆ ದ್ವೇಷ ಹುಟ್ಟಿಸುವವರು ಅನ್ಯಧರ್ಮೀಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಕರೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಮದುವೆಗೆ ಮುಂಚಿತವಾಗಿ ಬದುಕು ಕಟ್ಟಿಕೊಳ್ಳಲು ಸರಿಯಾದ ವಿದ್ಯೆ, ಉತ್ತಮ ಉದ್ಯೋಗ ಪಡೆಯಲು ಯಾವತ್ತು ಸಲಹೆ ನೀಡದೆ ಹಿಂದುಳಿದ ವರ್ಗದ ಹಿಂದೂ ಯುವಕರ ರಕ್ತ ಬಿಸಿಯಾಗಿಸಿ ಅವರಲ್ಲಿ ದ್ವೇಷ ಮನೋಭಾವನೆ ಹುಟ್ಟಿಸಿ ಅವರ ದಾರಿ ತಪ್ಪಿಸಿ ಅವರು ಜೈಲು ಸೇರುವಂತೆ, ಇನ್ನು ಹಲವಾರು ಮಂದಿ ಹತ್ತಾರು ಪ್ರಕರಣಗಳಲ್ಲಿ ಸಿಲುಕಿ ಕೊಳ್ಳುವಂತೆ ಮಾಡಿ ಇದೀಗ ಅಂತರ್ ಧರ್ಮೀಯ ವಿವಾಹವಾಗಲು ಕರೆ ಕೊಡಲು ಇಂತಹವರಿಗೆ ಯಾವ ನೈತಿಕತೆ ಇದೆಂದು ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.





