ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತ ದೇಹವೊಂದು ಪತ್ತೆಯಾಗಿದ್ದು, ಇದು ಕಳೆದ ರಾತ್ರಿಯಿಂದ ನಾಪತ್ತೆಯಾಗಿದ್ದ ಗೋಳಿತೊಟ್ಟು ಗ್ರಾಮದ ಆಂಜರ ಮನೆ ನಿವಾಸಿ ಗಗನ್ ರಾಜ್ ಶೆಟ್ಟಿ (20) ಎಂದು ಗುರುತಿಸಲಾಗಿದೆ.
ಆಂಜರ ಮನೆ ನಿವಾಸಿ ರವಿಚಂದ್ರ ಶೆಟ್ಟಿ ಎಂಬವರ ಮಗನಾದ ಗಗನ್ ರಾಜ್ ಶೆಟ್ಟಿ ಅಟೋ ಚಾಲಕನಾಗಿದ್ದು, ಸೋಮವಾರ ರಾತ್ರಿ ನೆಲ್ಯಾಡಿ ಕಡೆಗೆ ಬಾಡಿಗೆ ಇದೆ ಎಂದು ಹೇಳಿ ಹೋದಾತ ರಾತ್ರಿ 10 ಗಂಟೆಯಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಅವರ ಅಟೋ ರಿಕ್ಷಾ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಬಳಿ ನಿಲ್ಲಿಸಲಾಗಿದ್ದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಸಂಶಯ ತಾಳಿ ನದಿಯಲ್ಲಿ ಪರಿಶೀಲನೆ ನಡೆಸಿದಾಗ ನದಿಯಲ್ಲಿ ಶವವೊಂದು ತೇಲುತ್ತಿದ್ದ ದೃಶ್ಯ ಕಂಡು ಬಂದಿದೆ. ತೆಪ್ಪದ ಸಹಾಯದಿಂದ ಶವವನ್ನು ಮೇಲಕ್ಕೆತ್ತಿ ಪರಿಶೀಲಿಸಿದಾಗ ಅದು ನಾಪತ್ತೆಯಾದ ಗಗನ್ ರಾಜ್ ಶೆಟ್ಟಿಯವರದೆಂದು ದೃಢಪಡಿಸಲಾಯಿತು.
ಉಪ್ಪಿನಂಗಡಿ ಎಸೈ ಅವಿನಾಶ್ ರವರು ತನಿಖೆ ನಡೆಸುತ್ತಿದ್ದಾರೆ.
Next Story