ಕನಿಷ್ಠ ವೇತನ, ತುಟ್ಟಿಭತ್ತೆ ಜಾರಿಗೊಳಿಸಲು ಎಐಟಿಯುಸಿ ಆಗ್ರಹ

ಉಡುಪಿ, ಮಾ.12: ಕರ್ನಾಟಕ ಸರಕಾರ ನೂತನ ಕನಿಷ್ಟ ಕೂಲಿಯನ್ನು ಘೋಷಿಸಿರುವುದನ್ನು ತುಟ್ಟಿಭತ್ತೆ ಸಮೇತ 2024ರ ಎಪ್ರಿಲ್ ತಿಂಗಳಿನಿಂದಲೇ ಜಾರಿಗೊಳಿಸಬೇಕು ಎಂದು ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್‌ನ (ಎಐಟಿಯುಸಿ) 79ನೇ ವಾರ್ಷಿಕ ಮಹಾಸಭೆಯಲ್ಲಿ ಒತ್ತಾಯಿಸಲಾಗಿದೆ.
ಪ್ರತೀ 5 ವರ್ಷಕ್ಕೊಮ್ಮೆ ಪರಿಷ್ಕತ ಕನಿಷ್ಠ ವೇತನ ಜಾರಿಯಾಗ ಬೇಕಾಗಿರುವುದು ನಿಯಮ. ಆದರೆ 6 ವರ್ಷ ಕಳೆದರೂ ಸರಕಾರ ಮತ್ತು ಬೀಡಿ ಮಾಲಕರು ವಿಷಯವನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ. ತೀರ್ಮಾನವಾಗಿರುವ ಕನಿಷ್ಠ ವೇತನವನ್ನು ಕ್ಲಪ್ತ ಸಮಯಕ್ಕೆ ಜಾರಿ ಗೊಳಿಸುವಂತೆ ಎಐಟಿಯುಸಿ ಒತ್ತಾಯಿ ಸಿದೆ. ಈ ಎಲ್ಲಾ ವಿಷಯಗಳ ಕುರಿತು ಚಳುವಳಿಯೊಂದನ್ನು ರೂಪಿಸಲು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಸುಮತಿ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನುದ್ಡೇಶಿಸಿ ಎಐಟಿಯುಸಿ ಜಿಲ್ಲಾ ಕಾರ್ಯ ದರ್ಶಿ ವಿ.ಎಸ್ ಬೇರಿಂಜ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ ಕಾರ್ಯರ್ಶಿ ಸುರೇಶ್ ಕುಮಾರ್ ಮಾತಾಡಿದರು.
ವೇದಿಕೆಯಲ್ಲಿ ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬೀಡಿ ಯೂನಿಯನ್‌ನ ಕೋಶಾಧಿಕಾರಿ ಶಿವಾನಂದ ಉಡುಪಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶಶಿಕಲಾ ಗಿರೀಶ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ 2024-25ನೇ ಸಾಲಿಗೆ 21 ಮಂದಿಯ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಶಾಂತಾ ನಾಯಕ್, ಉಪಾಧ್ಯಕ್ಷರಾಗಿ ಸುಮತಿ ಶೆಟ್ಟಿ, ಅಪ್ಪಿ ಶೆಟ್ಟಿಗಾರ್ ಕಾರ್ಯದರ್ಶಿಯಾಗಿ ಶಶಿಕಲಾ ಗಿರೀಶ್, ಸಹ ಕಾರ್ಯದರ್ಶಿಗಳಾಗಿ ಸುಚಿತ್ರಾ, ವಾರಿಜ ನಾಯಕ್, ಕೋಶಾಧಿಕಾರಿಯಾಗಿ ಶಿವಾನಂದ ಉಡುಪಿ ಸರ್ವಾನುಮತದಿಂದ ಆಯ್ಕೆಯಾದರು. ಕೊನೆಯಲ್ಲಿ ಶಿವಾನಂದ ಉಡುಪಿ ವಂದಿಸಿದರು.