ಮಹಿಳೆ ಸಮಾಜ ಬದಲಾವಣೆಯ ಶಿಲ್ಪಿ: ಡಾ.ಕೆ.ವಿದ್ಯಾಕುಮಾರಿ

ಉಡುಪಿ, ಮಾ.13: ಮಹಿಳೆ ಸಮಾಜ ಬದಲಾವಣೆಯ ಶಿಲ್ಪಿ. ಪುರುಷ ಮತ್ತು ಮಹಿಳೆ ಸಮಾನವಾಗಿ ಕೊಡುಗೆ ನೀಡಿದರೆ ಮಾತ್ರ ಸಮಾಜ ಅಭಿವೃದ್ದಿ ಕಾಣಲು ಸಾಧ್ಯವಿದೆ ಎಂದು ಉಡುಪಿಯ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಪ್ಯಾರ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಮೇರಿ ಶ್ರೇಷ್ಠ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಮಹಿಳೆಯರ ತ್ಯಾಗ ಹಾಗೂ ಪುರುಷನ ಏಳಿಗೆಯಲ್ಲಿ ಮಹಿಳೆ ಪಾತ್ರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ಯೊಂದು ದಿನವೂ ಮಹಿಳೆಯರಿಗೆ ಗೌರವ ನೀಡುವಂತಾಗಬೇಕು ಎಂದರು.
ವೇದಿಕೆಯಲ್ಲಿ ಕಾಲೇಜಿನ ಸಿಓಓ ಡಾ. ಗೌರಿ ಪ್ರಭು, ಎಚ್.ಆರ್. ತಾರಾ ಶಶಿಧರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ದೇವರಾಜ್ ಸ್ವಾಗತಿಸಿದರೆ, ಪವನ್ ಕುಮಾರ್ ವಂದಿಸಿದರು. ಕಾಲೇಜಿನ ಸಂಚಾಲಕ ಮಾಧವ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.