ಎರಡು ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆಗೆ ಆದೇಶ

ಕುಂದಾಪುರ: ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು ಎರ್ನಾಕುಲಂ ನಿಝಾಮುದ್ಧಿನ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆಗೆ ಒಪ್ಪಿಗೆ ಸೂಚಿಸಿ ರೈಲ್ವೆ ಸಚಿವರು ಆದೇಶ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಎರಡೂ ರೈಲುಗಳು ಕುಂದಾಪುರ ನಿಲುಗಡೆ ಬೇಕು ಎಂಬ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹಲವು ವರ್ಷಗಳ ಬೇಡಿಕೆ ಇದೀಗ ಈಡೇರಿಸಿದೆ. ಇದರಿಂದ ಕೊಲ್ಲೂರು ಮೂಕಾಂಬಿಕಾ ದೇಗುಲದ ಭಕ್ತಾದಿಗಳಿಗೆ, ದೆಹಲಿ, ಮುಂಬಯಿ, ವಾಪಿ, ಸಿಲ್ವಾಸ ತೆರಳುವ ಕುಂದಾಪುರದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಸಮಿತಿ ಸಲ್ಲಿಸಿದ ಮನವಿಯಂತೆ ಸಂಸದರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಸೋಮಣ್ಣನವರಿಗೆ ಮನವಿ ಮಾಡಿ ಕರಾವಳಿ ಭಾಗದ ಬೇಡಿಕೆಗಳನ್ನು ಸಲ್ಲಿಸಿದ್ದರು.
ರೈಲು ವೇಳಾಪಟ್ಟಿ: ಪ್ರತೀ ಬುಧವಾರ ಮಧ್ಯಾಹ್ನ 2 ಗಂಟೆಗೆ ಕುಂದಾಪುರ ದಿಂದ ಎರ್ನಾಕುಲಂ ದೆಹಲಿ ಕಡೆ ತೆರಳುವ ರೈಲು ಶನಿವಾರ ಮಧ್ಯಾಹ್ನ 2 ಗಂಟೆಗೆ ದೆಹಲಿಯಿಂದ ಬಂದು ಎರ್ನಾಕುಲಂ ಕಡೆ ತೆರಳುತ್ತದೆ.
ಇನ್ನು ತಿರುವನಂತಪುರಂ ದೆಹಲಿ ರೈಲು ಪ್ರತೀ ಶನಿವಾರ ಮಧ್ಯಾಹ್ನ 2 ಗಂಟೆಗೆ ಕುಂದಾಪುರ ಮೂಲಕ ದೆಹಲಿಗೆ ತೆರಳಲಿದ್ದು, ಪ್ರತೀ ಗುರುವಾರ ಮದ್ಯಾಹ್ನ 2 ಗಂಟೆಗೆ ದೆಹಲಿಯಿಂದ ಕುಂದಾಪುರ ಮೂಲಕ ತಿರುವನಂತಪುರಂ ತಲುಪಲಿದೆ.