ಗುಂಡೇಟು ಪ್ರಕರಣ: ಗರುಡ ಗ್ಯಾಂಗ್ ಸದಸ್ಯ ಇಸಾಕ್ ಉಡುಪಿ ಜಿಲ್ಲಾಸ್ಪತ್ರೆಗೆ ವರ್ಗ
ಪೊಲೀಸರಿಂದ ಹಿರಿಯಡ್ಕದಲ್ಲಿ ಸ್ಥಳ ಮಹಜರು

(ಇಸಾಕ್)
ಮಣಿಪಾಲ, ಮಾ.13: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಮಾ.12ರಂದು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ನಾವುಂದ ಮೂಲದ ಇಸಾಕ್(27)ನನ್ನು ಶುಕ್ರವಾರ ಮಣಿಪಾಲ ಆಸ್ಪತ್ರೆಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ.
ಬೆಂಗಳೂರಿನ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ದಲ್ಲಿ ಮಾ.4ರಂದು ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಇಸಾಕ್ ತನ್ನ ಕಾರಿನಲ್ಲಿ ಇತರ ವಾಹನ ಗಳಿಗೆ ಢಿಕ್ಕಿ ಹೊಡೆದು ತಪ್ಪಿಸಿಕೊಂಡಿದ್ದನು.
ತನಿಖೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಇಸಾಕ್ ಹಾಗೂ ಆತನಿಗೆ ಸಹಕಾರ ನೀಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮಾ.12ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಿತ್ತು.
5 ಗುಂಡುಗಳ ಹಾರಾಟ: ಇವರನ್ನು ಖಾಸಗಿ ವಾಹನದಲ್ಲಿ ಮಣಿಪಾಲಕ್ಕೆ ಕರೆತರುವಾಗ ದಾರಿ ಮಧ್ಯೆ ಹಿರಿಯಡ್ಕ ಸಮೀಪ ಇಸಾಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.
ಈ ವೇಳೆ ಪೊಲೀಸ್ ನಿರೀಕ್ಷಕ ದೇವರಾಜ್ ಇಲಾಖಾ ಪಿಸ್ತೂಲಿನಿಂದ ಮೊದಲು ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ಇಸಾಕ್ ಪೊಲೀಸ್ ನಿರೀಕ್ಷಕರ ಕೈಯಲ್ಲಿದ್ದ ಪಿಸ್ತೂಲನ್ನು ಕಿತ್ತುಕೊಳ್ಳಲು ಮುನ್ನುಗ್ಗಿದನು. ಆಗ ಅವರು ಆತನ ಕಡೆ ಎರಡು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಗುಂಡು ಆತನ ಎಡಗಾಲಿಗೆ ತಾಗಿ ಆತ ಅಲ್ಲಿಯೇ ಕುಸಿದು ಬಿದ್ದನು ಎಂದು ತಿಳಿದುಬಂದಿದೆ.
ಇಸಾಕ್ಗೆ ಕಾಲಿನ ಸರ್ಜರಿ: ಗುಂಡೇಟು ತಗುಲಿ ತೀವ್ರವಾಗಿ ಗಾಯ ಗೊಂಡ ಇಸಾಕ್ನನ್ನು ಮೊದಲು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗಿತ್ತು.
ಇಸಾಕ್ನನ್ನು ಕಾಲಿನ ಸರ್ಜರಿಗಾಗಿ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಪೊಲೀಸರು ಸ್ಥಳಾಂತರ ಮಾಡಿದ್ದಾರೆ. ಇದೀಗ ಇಸಾಕ್ ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣ ಗುಣಮುಖನಾದ ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಚೇತರಿಕೆ: ಇಸಾಕ್ ಮೂತ್ರ ವಿಸರ್ಜನೆಗೆ ಇಳಿದಾಗ ಉಡುಪಿ ನಗರ ಠಾಣಾ ಸಿಬ್ಬಂದಿ ಹೇಮಂತ್ ಇದ್ದು, ಈ ವೇಳೆ ಇಸಾಕ್ ಹೇಮಂತ್ರನ್ನು ತಳ್ಳಿ ಕಣಜಾರು ಕಾಡಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು ಎನ್ನಲಾಗಿದೆ.
ಆಗ ಕೊಲ್ಲೂರು ಎಸ್ಸೈ ವಿನಯ್ ಕೊರ್ಲಹಳ್ಳಿ ಮತ್ತು ಹಿರಿಯಡ್ಕ ಎಸ್ಸೈ ಮಂಜುನಾಥ್ ಮರಬಾದ, ಆರೋಪಿ ಇಸಾಕ್ನನ್ನು ಹಿಡಿಯಲು ಪ್ರಯುತ್ನಿಸಿ ದರು. ಆಗ ಆತ ಅವರ ಮೇಲೂ ದಾಳಿ ನಡೆಸಿದನು. ಇದರಿಂದ ಇಬ್ಬರು ಎಸ್ಸೈ ಹಾಗೂ ಓರ್ವ ಸಿಬ್ಬಂದಿ ಗಾಯಗೊಂಡಿದ್ದರು.
ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚೇತರಿಸಿ ಕೊಂಡಿದ್ದಾರೆ. ಶುಕ್ರವಾರ ಇವರು ಮೂವರು ಆಸ್ಪತ್ರೆಯಿಂದ ಬಿಡುಗಡೆ ಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳ ಮಹಜರು: ಬುಧವಾರ ಸಂಜೆ ಹಿರಿಯಡ್ಕ ಗುಡ್ಡೆ ಅಂಗಡಿ ಬಳಿ ನಡೆದ ಘಟನಾ ಸ್ಥಳದಲ್ಲಿ ಪೊಲೀಸರು ಇಂದು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದರು.
ಸೀನ್ ಕ್ರೈಮ್ ಆಫೀಸರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿ ತಪ್ಪಿಸಿಕೊಳ್ಳುವ ಸಂದರ್ಭ ಹೊಡೆದ ಪಿಸ್ತೂಲ್ ಹಾಗೂ ಹಾರಿದ ಗುಂಡುಗಳ ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ಡಿ.ಟಿ.ಪ್ರಭು ಹಾಗೂ ಇತರ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೂವರಿಗೆ ನ್ಯಾಯಾಂಗ ಬಂಧನ
ಚನ್ನರಾಯಪಟ್ಟಣದಲ್ಲಿ ಇಸಾಕ್ನೊಂದಿಗೆ ಬಂಧಿತರಾಗಿದ್ದ ಮಂಗಳೂರು ಸುರತ್ಕಲ್ನ ರಾಹಿದ್(25), ಕೇರಳ ಕ್ಯಾಲಿಕಟ್ನ ಸಾಮಿಲ್(26), ಕ್ಯಾಲಿಕಟ್ ಮತ್ತು ಕಾಸರಗೋಡು ಮಂಜೇಶ್ವರದ ನಿಝಾಮುದ್ದೀನ್(25) ಎಂಬವರನ್ನು ಮಣಿಪಾಲ ಪೊಲೀಸರು ಗುರುವಾರ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇವರನ್ನು ಹಿರಿಯಡ್ಕ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ಇವರನ್ನು ಇಸಾಕ್ಗೆ ಸಹಕಾರ ನೀಡಿದ ಹಾಗೂ ಮಾದಕ ದ್ರವ್ಯ ವಸ್ತುಗಳ ಸಾಗಾಟ ಆರೋಪದಲ್ಲಿ ಬಂಧಿಸಿದ್ದಾರೆ. ಇವರ ಮೇಲೆ ಇತರ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಒಟ್ಟು 13 ಮಂದಿ ಬಂಧನ
ಇಸಾಕ್ ಹಾಗೂ ಮೂವರ ಬಂಧನನೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾ.4ರಂದು ಕಾರಿನಲ್ಲಿ ಎಸ್ಕೈಪ್ ಆಗುವ ಸಂದರ್ಭ ಇದ್ದ ಇಸಾಕ್ನ ಗೆಳತಿ ಸುಜೈನ್, ಆಕೆಯ ತಾಯಿ, ಸಹಚರ ಫೈಝಲ್, ಇಸಾಕ್ನ ಪತ್ನಿ, ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಸೇರಿದಂತೆ ಒಟ್ಟು 9 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು.