ಓಮನ್ ಬೋಟಿನ ಮಾಹಿತಿ ನೀಡಿದ್ದ ಮೀನುಗಾರ ಕಿಶೋರ್ ಕರ್ಕೇರಗೆ ಸನ್ಮಾನ

ಮಲ್ಪೆ, ಮಾ.14: ಓಮನ್ ದೇಶದ ಮೀನುಗಾರಿಕಾ ಬೋಟು ಹಾಗೂ ಮೂವರು ಫೆ.23ರಂದು ದೇಶದ ಜಲಪರಿಧಿಯೊಳಗೆ ಅನಧಿಕೃತವಾಗಿ ಪ್ರವೇಶಿಸಿರುವುದನ್ನು ಪತ್ತೆ ಹಚ್ಚಿ ಕರಾವಳಿ ಕಾವಲು ಪೊಲೀಸ್ ಕಚೇರಿಗೆ ಮಾಹಿತಿ ನೀಡುವ ಮೂಲಕ ಸಮಯ ಪ್ರಜ್ಞೆ ಮೆರೆದ ಮಲ್ಪೆ ಶ್ರೀಮಹಾಕಾಳಿ ಬೋಟಿನ ಮೀನುಗಾರ ಕಿಶೋರ್ ಕರ್ಕೇರ ಅವರನ್ನು ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಮೀನುಗಾರಿಕಾ ಇಲಾಖೆಯೊಂದಿಗಿನ ಸಮನ್ವಯ ಸಭೆಯಲ್ಲಿ ಸನ್ಮಾನಿಸಲಾಯಿತು.
ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್. ಮಾತನಾಡಿ, ಕಿಶೋರ್ ಕರ್ಕೇರ ನೀಡಿದ ಮಾಹಿತಿಯಿಂದ ಓಮಾನ್ ದೇಶದ ಬೋಟನ್ನು ಮತ್ತು ಮೀನುಗಾರರನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ಇಂತಹ ಮಾಹಿತಿಯು ಮಹತ್ವದಾಗಿದ್ದು ಮತ್ತು ಆ ಸಮಯದಲ್ಲಿ ಅವರು ತೋರಿರುವ ಚುರುಕುತನ ಮತ್ತು ಸಮಯಪ್ರಜ್ಞೆ, ಮೀನುಗಾರರಿಗೆ ಮಾದರಿಯಾಗಿದೆ. ಮುಂದೆಯೂ ಕೂಡ ಮೀನುಗಾರರಿಂದ ಇಲಾಖೆ ಇದೇ ರೀತಿಯ ಸಹಕಾರವನ್ನು ಬಯಸುತ್ತದೆ ಎಂದು ತಿಳಿಸಿದರು.
ಉಡುಪಿ ಮೀನುಗಾರಿಕಾ ಇಲಾಖಾ ಜಂಟಿ ನಿರ್ದೇಶಕ ವಿವೇಕ್, ಸ್ಥಳೀಯ ಮೀನುಗಾರ ಮುಖಂಡರು ಮತ್ತು ಜಿಲ್ಲೆಯ ಎಲ್ಲ ಮೀನುಗಾರಿಕ ಇಲಾಖೆಯ ಅಧಿಕಾರಿಗಳು, ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು. ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





