ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು: ಇಬ್ಬರ ಬಂಧನ

ಕಾಪು, ಮಾ.14: ಕಾಪು ಪೇಟೆ ನ್ಯಾಯಬೆಲೆ ಅಂಗಡಿ ಸಮೀಪ ಮಾ.14 ರಂದು ಮಧ್ಯಾಹ್ನ ವೇಳೆ ಪಡಿತರದಾರರಿಗೆ ವಿತರಿಸುವ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೆಜಮಾಡಿಯ ಕಲಂದರ್ ಶಾಫಿ(43) ಹಾಗೂ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ಉಬೈದುಲ್ಲ(31) ಬಂಧಿತ ಆರೋಪಿಗಳು. ಕಾಪು ಆಹಾರ ನಿರೀಕ್ಷಕ ಎಂ.ಟಿ.ಲೀಲಾನಂದ ನೇತೃತ್ವದಲ್ಲಿ ದಾಳಿ ನಡೆಸಿದಾಗ ಇವರು ಪಡಿತರ ದಾರರಿಗೆ ವಿತರಿಸುತ್ತಿರುವ ಸುಮಾರು 8,500ರೂ. ಮೌಲ್ಯದ 250 ಕೆ.ಜಿ. ಅಕ್ಕಿಯನ್ನು 6 ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವುದು ಕಂಡು ಬಂದಿತ್ತು.
ಇವರು ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಪಡಿತರದಾರರಿಂದ ಕೆ.ಜಿ ಅಕ್ಕಿಗೆ 20ರೂ.ನಂತೆ ಖರೀದಿಸಿದ್ದು, ಅದನ್ನು ಮುದರಂಗಡಿ ಪ್ರತಾಪ್ ಎಂಬವರಿಗೆ ಮಾರಾಟ ಮಾಡಲು ತೆಗೆದು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





