ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಉಳಿಯುವಿಗೆ ಶ್ರಮ: ಪ್ರೊ.ಸಿ.ಎಸ್.ಪಾಟೀಲ್

ಉಡುಪಿ, ಮಾ.15: ವಕೀಲ ವೃತ್ತಿಯಲ್ಲಿ ಅಧ್ಯಯನ ಎಂಬುದು ನಿರಂತರ ವಾಗಿರುತ್ತದೆ. ಕಾನೂನು ಅರಿವಿನಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಸಂವಿಧಾನ ಅಥವಾ ಕಾಯಿದೆ ತಿಳಿದುಕೊಳ್ಳುವ ಮೂಲಕ ವಕೀರಲರು ಪ್ರಜಾಪ್ರಭುತ್ವದ ಉಳಿಯುವಿಗೆ ಶ್ರಮಿಸಬೇಕು ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಹಾಗೂ ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯಗಳ ಸಹಯೋಗದಲ್ಲಿ ಉಡುಪಿ ಜಿಪಂ ಸಭಾಂಗಣದಲ್ಲಿ ಶನಿವಾರ ಕಾನೂನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ತುಮಕೂರು ವಲಯ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸ್ಪರ್ಧೆಯನ್ನು ಉದ್ಘಾಟಿಸಿದ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ಮಾತನಾಡಿ, ನ್ಯಾಯವಾದಿಗಳು ಮತ್ತು ನ್ಯಾಯಾಧೀಶರಿಗೆ ಭಾಷೆಯ ಮೇಲಿನ ಹಿಡಿತ, ಪ್ರೌಢಿಮೆ ಅತೀ ಅಗತ್ಯವಾಗಿದೆ. ಓದು, ಸಂವಹನ ಕಲೆ ಇಲ್ಲದೇ ಹೋದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಕ್ಷಿದಾರ/ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯ ಇಲ್ಲ. ಆದುದರಿಂದ ಯುವ ನ್ಯಾಯವಾದಿಗಳು, ವಕೀಲ ವಿದ್ಯಾರ್ಥಿಗಳು ಸಂವಿಧಾನ, ಕಾನೂನಿನ ಅರಿವು ಹೆಚ್ಚಿಸಿಕೊಳ್ಳಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ತರವಾಗಿದೆ. ವಕೀಲರಿಗೆ ಇನ್ನೊಬ್ಬರ ನೋವು, ಸಂಕಷ್ಟವನ್ನು ನ್ಯಾಯಾಧೀಶರ ಮುಂದೆ ಬಿಂಬಿಸಿ ನ್ಯಾಯ ಒದಗಿಸುವಂತೆ ಮಾಡುವ ಜವಾಬ್ದಾರಿ ಇರುತ್ತದೆ. ಇನ್ನೊಬ್ಬರ ನೋವನ್ನು ನ್ಯಾಯಾಧೀಶರ ಮುಂದೆ ಪ್ರದರ್ಶಿಸುವುದಕ್ಕೆ ಸಂವಹನ ಶೈಲಿ ಅಗತ್ಯವಾಗಿದೆ. ನ್ಯಾಯಾಧೀಶರಿಗೆ ಜೀವನದ ಅಪರಿಮಿತ ಅನುಭವ, ಪ್ರೌಢಿಮೆ ಬೇಕಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಬಾಳಿಗಾ ಕಾನೂನು ಕಾಲೇಜು ನಿರ್ದೇಶಕಿ ಪ್ರೊ. ನಿರ್ಮಲಾ ಕುಮಾರಿ ಕೆ. ಉಪಸ್ಥಿತರಿದ್ದರು.
ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ರಘುನಾಥ್ ಕೆ.ಎಸ್. ಸ್ವಾಗತಿಸಿದರು. ಕಾನೂನು ವಿದ್ಯಾರ್ಥಿನಿಯರಾದ ದಿಶಾ, ಚಂದ್ರಿಕಾ ಅತಿಥಿಗಳನ್ನು ಪರಿಚಯಿಸಿದರು. ವೈಕುಂಠ ಬಾಳಿಗಾ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಈರಪ್ಪ ಎಸ್.ಮೇದಾರ್ ವಂದಿಸಿದರು. ವಿದ್ಯಾರ್ಥಿ ಅಚಲ ಹೆಬ್ಬಾರ್ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.
10 ಮಂದಿ ರಾಜ್ಯಮಟ್ಟದ ಸ್ಪರ್ಧೆಗೆ
ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಮೊದಲು ವಿಧಾನ ಸಭಾಧ್ಯಕ್ಷರ ಆಯ್ಕೆ, ತದನಂತ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಉಪಮುಖ್ಯಮಂತ್ರಿ ಆಯ್ಕೆಯೊಂದಿಗೆ ಮಂತ್ರಿಮಂಡಲವನ್ನು ರಚಿಸಲಾಯಿತು. ವಿರೋಧ ಪಕ್ಷ ನಾಯಕರನ್ನು ಆರಿಸಿ ಕಲಾಪವನ್ನು ಆರಂಭಿಸಲಾಯಿತು.
ರಾಜ್ಯದ 6 ವಲಯಗಳಲ್ಲಿ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ನಡೆಯುತ್ತಿದ್ದು, ಇಲ್ಲಿ ಆಯ್ಕೆಯಾದ 10 ಮಂದಿಯನ್ನು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ವಿಷಯ, ಭಾಷೆಯ ಮೇಲಿನ ಹಿಡಿತ, ವಿಚಾರ ಮಂಡನೆ ಸಹಿತ ಕೆಲವೊಂದು ಮಾನದಂಡದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.







