ಅಕ್ರಮ ಚಿನ್ನ ಸಾಗಣೆ ಪ್ರಕರಣ; ಸಂಪೂರ್ಣ ತನಿಖೆ ಸಿಬಿಐಗೆ ಒಪ್ಪಿಸಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಉಡುಪಿ, ಮಾ.15: ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಪುತ್ರಿ, ನಟಿ ರನ್ಯಾ ರಾವ್ ಒಳಗೊಂಡಿರುವ ವಿದೇಶಗಳಿಂದ ಅಕ್ರಮ ಚಿನ್ನ ಸಾಗಾಣಿಕೆಯ ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಜೀರ್ಣೋದ್ಧಾರಗೊಂಡಿರುವ ಕಾಪು ಮಾರಿಗುಡಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಕುಟುಂಬ ಸಮೇತ ರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲು ನಗರಕ್ಕೆ ಆಗಮಿಸಿದ ಸಚಿವರು ಗೀತಾಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ರಾಜ್ಯ ಸರಕಾರದ ಅಧಿಕಾರಿಗಳೇ ಆರೋಪಿಗೆ ಎಸ್ಕಾರ್ಟ್ ನೀಡಿದ್ದಾರೆ. ಪ್ರೋಟೋಕಾಲ್ ವ್ಯವಸ್ಥೆ ಮೂಲಕ ಯಾವುದೇ ತಪಾಸಣೆಗೊಳಗಾಗದೇ ಆಕೆ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ರಾಜ್ಯದ ಕೆಲ ಮಂತ್ರಿಗಳ ಹೆಸರು ಸಹ ಕೇಳಿ ಬರುತ್ತಿದೆ. ರಾಜ್ಯ ಸರಕಾರ ಈ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ ಎಂದು ಜೋಷಿ ತಿಳಿಸಿದರು.
ಗೃಹ ಸಚಿವ ಡಾ.ಪರಮೇಶ್ವರ್ ಪ್ರಕರಣವನ್ನು ಮೊದಲು ಸಿಐಡಿ ತನಿಖೆಗೆ ಕೊಟ್ಟರು. ಆರೋಪಿ ರನ್ಯಾ ರಾವ್ ತಂದೆ ರಾಮಚಂದ್ರ ರಾವ್ ಡಿಜಿಐ ಆಗಿರುವುದರಿಂದ ಅಡಿಷನಲ್ ಚೀಫ್ ಸೆಕ್ರೆಟರಿಗೆ ಕೊಟ್ಟಿದ್ದೇ ವೆಂದು ತಿಳಿಸಿದರು ಎಂದು ಜೋಷಿ ನುಡಿದರು.
ಕಸ್ಟಮ್ ತಪ್ಪಿಸಿ ಪ್ರೋಟೋಕಾಲ್ ಮೂಲಕ ಹೇಗೆ ಕರೆತರಲಾಯಿತು ಎಂದು ಪ್ರಶ್ನಿಸಿದ ಪ್ರಹ್ಲಾದ್ ಜೋಷಿ, ಭಾರತ ಸರಕಾರದ ಇಂಟೆಲಿಜೆನ್ಸ್ ಬರುವವರೆಗೆ ನಿಮ್ಮ ಇಂಟೆಲಿಜೆನ್ಸ್ ಏನು ಮಾಡುತ್ತಿತ್ತು? ಇಂಥ ಹಲವು ಹಲವು ಪ್ರಶ್ನೆಗಳಿದ್ದು, ಉತ್ತರ ಬೇಕಾಗಿದೆ. ಹೀಗೆ ಬರುವ ದುಡ್ಡು, ಬಂಗಾರಗಳು ಸಮಾಜ ವಿದ್ರೋಹಿ ಕೃತ್ಯಕ್ಕೆ ಬಳಕೆಯಾಗುತ್ತವೆ. ಆದ್ದರಿಂದ ಈ ಬಗ್ಗೆ ಸರಕಾರ ಗಂಭೀರವಾಗಿದ್ದು ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ರೂಪಾಯಿ ಚಿಹ್ನೆ ನಿರಾಕರಣೆ ದುರ್ದೈವ: ತಮಿಳುನಾಡಿನ ಡಿಎಂಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಧಿಕೃತ ರೂಪಾಯಿ ಚಿನ್ಹೆ ಬದಲಿಗೆ ತಮಿಳಿನ ರೂ. ಅಕ್ಷರ ಬಳಸುವ ನಿರ್ಧಾರ ದುರ್ದೈವವೇ ಸರಿ ಎಂದು ಜೋಷಿ ನುಡಿದರು. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ರೂಪಾಯಿ ಚಿಹ್ನೆ ಮೋದಿ ಮಾಡಿದ್ದಾ? ಬಿಜೆಪಿ ಮಾಡಿದ್ದಾ? ಕಾಂಗ್ರೆಸ್ ಸರಕಾರ ಇರುವಾಗ ಆಗಿದ್ದಲ್ವಾ? ಎಂದ ಅವರು, ಆಗ ಇವರ ಪಕ್ಷದವರೆಲ್ಲಾ ಕೇಂದ್ರದಲ್ಲಿ ಸಚಿವರಾಗಿದ್ದರು. ಎ.ರಾಜ, ದಯಾನಿಧಿ ಮಾರನ್ ಎಲ್ಲರೂ ಸರ್ಕಾರದಲ್ಲಿದ್ದರು.. ಯಾಕೆ ಈ ತೀರ್ಮಾನ ತೆಗೆದುಕೊಂಡ್ರಿ ಎಂದು ಪ್ರಶ್ನಿಸಿದರು.
ಅಂದು ಕಾಂಗ್ರೆಸ್‌ನ ಚಿದಂಬರಂ ಹಣಕಾಸು ಸಚಿವರಾಗಿದ್ದರು. ಹಾಗಿದ್ರೆ ಚಿಹ್ನೆ ಮಾಡಿದ್ದು ಯಾರು?. ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷಗಳು ರಾಜಕೀಯವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಬಾರ ದಿತ್ತು. ತಥಾಕಥಿತ ಇಂಡಿ ಘಟಬಂಧನ್ ಮಾಡೋದೇ ಹೀಗೆ. ನೀವು ಮಾಡಿದ ಸಿಂಬಲ್‌ಗೆ ನಮ್ಮ ಅಭ್ಯಂತರ ಏನು ಇರಲಿಲ್ಲ...ಈ ಚಿಹ್ನೆಯನ್ನು ಡಿಸೈನ್ ಮಾಡಿದ್ದು ಕೂಡ ತಮಿಳುನಾಡಿನವರು ಎಂದು ಜೋಷಿ ತಿಳಿಸಿದರು.
ನಿಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಈ ರೀತಿ ಹೇಳಿಕೆ ನೀಡಬೇಡಿ.ಡಿಎಂಕೆ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಈ ರೀತಿ ಮಾತನಾಡುತ್ತೀರಿ. ರೂಪಾಯಿ ಬದಲಿಸುತ್ತೀರಿ...ತ್ರಿಬಾಷಾ ಸೂತ್ರ ಮಾಡಿರೋದು ಯಾರು? ನೆಹರು ಕಾಲದಿಂದ ತ್ರಿಭಾಷಾ ಸೂತ್ರ ಇದೆ. ಹೊಸ ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರ ಮಾಡಲು ಹೇಳಿದ್ದೇವೆ..ಆದರೆ ನಾವು ಹಿಂದಿ ಇರಬೇಕು ಅಂತ ಹೇಳಿದ್ದೆವಾ? ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ವಂಚನೆ ಮಾಡಿ ತಮ್ಮ ವೈಫಲ್ಯತೆಯನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿಯೊಳಗಿನ ಭಿನ್ನಮತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಷಿ, ಹೈಕಮಾಂಡ್ ಎಲ್ಲಾ ವಿಚಾರವನ್ನು ಗಮನಿಸಿದೆ. ಅದನ್ನು ಸರಿ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ಒಂದು ವಾರದಿಂದ ನೀವೆಲ್ಲರೂ ಅದನ್ನು ಗಮನಿಸುತಿದ್ದೀರಿ ಎಂದರು.
ಪಾಕ್ ಬಾಲಿಶ ಹೇಳಿಕೆ: ಪಾಕ್ ರೈಲು ಹೈಜಾಕ್‌ಗೆ ಭಾರತದ ಪ್ರಚೋದನೆ ಕಾರಣ ಎಂಬ ಆರೋಪದ ಕುರಿತು ಉತ್ತರಿಸಿದ ಕೇಂದ್ರ ಸಚಿವ ಓಷಿ, ಈಗಾಗಲೇ ವಿದೇಶಾಂಗ ಸಚಿವಾಲಯ ಈ ಬಗ್ಗೆ ಸುದೀರ್ಘ ಉತ್ತರ ನೀಡಿದೆ. ಪಾಕಿಸ್ತಾನದಲ್ಲಿ ಆಡಳಿತ ವ್ಯವಸ್ಥೆಯೇ ಕುಸಿದು ಹೋಗಿದ್ದು, ಅಲ್ಲಿ ವಿದೇಶಿಯರು, ರಾಜತಾಂತ್ರಿಕರು ಹೋಗಲು ಭಯಪಡುವ ಪರಿಸ್ಥಿತಿ ಇದೆ. ಭಾರತವನ್ನು ದೂಷಿಸುವುದು ಅತ್ಯಂತ ಬಾಲಿಶತನ ಎಂದರು.







