ಡಾ.ತುಕರಾಂ ಪೂಜಾರಿ, ಗೋಪು ಮಡಿವಾಳರಿಗೆ ಜಾನಪದ ಪ್ರಶಸ್ತಿ ಪ್ರದಾನ

ಉಡುಪಿ, ಮಾ.15: ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಜಾನಪದ ವಿದ್ವಾಂಸ ಡಾ.ತುಕರಾಂ ಪೂಜಾರಿ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ದೈವಾರಾಧನೆಯ ಹಿರಿಯ ಸೇವಕ ಗೋಪು ಮಡಿವಾಳ ಅಲೆವೂರು ಅವರಿಗೆ ಶನಿವಾರ ಚಿಟ್ಪಾಡಿ ಲಕ್ಷ್ಮೀ ಸಭಾಭವನದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಡಾ.ತುಕಾರಾಂ ಪೂಜಾರಿ ಮಾತನಾಡಿ, ಯುವವಾಹಿನಿ ಜಾತಿ ಧರ್ಮ, ಪಕ್ಷಬೇಧ ಇಲ್ಲದೆ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ನಾರಾಯಣಗುರು ಚಿಂತನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ಈ ಸಂಘಟನೆ ಮಾದರಿಯಲ್ಲಿ ದೇಶ ಸಾಗಿದರೆ ಚಿತ್ರಣವೇ ಬದಲಾಗುತ್ತದೆ. ಇಂದು ಸಮಾಜದ ಪರಿಸ್ಥಿತಿ ನೋಡುವಾಗ ಭಯ ಆಗುತ್ತದೆ. ಇದಕ್ಕೆ ನಾರಾಯಣಗುರು ಚಿಂತನೆ ಅಗತ್ಯ ಎಂದು ಹೇಳಿದರು.
ತುಳುನಾಡಿನ ಜನರ ಬದುಕು ಅಂದರೆ ನಿಧಿ ಇದ್ದ ಹಾಗೆ. ತುಳುನಾಡಿನ ಸಂಸ್ಕೃತಿಯು ಜಗತ್ತಿನ ಭೂಭಾಗದಲ್ಲೇ ಬಹಳಷ್ಟು ವಿಶಿಷ್ಟವಾಗಿದೆ. ಅತ್ಯಂತ ಚಾರಿತ್ರಿಕವಾದ ನಮ್ಮ ಸಂಸ್ಕೃತಿಯನ್ನು ಯುವ ಜನತೆ ತಿಳಿದು ಅಧ್ಯಯನ ಮಾಡುವ ಕಾರ್ಯ ಅಗತ್ಯವಾಗಿ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕುಳೂರು, ಉದ್ಯಮಿ ರಂಜನ್ ಕೆ. ಮಾತನಾಡಿದರು.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ರಜತ ಸಂಭ್ರಮದ ಸಂಚಾಲಕ ರಘುನಾಥ್ ಮಾಬಿಯಾನ್, ಉಡುಪಿ ಘಟಕದ ಮಹಿಳಾ ಸಂಚಾಲಕಿ ಕಲ್ಯಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ಸ್ವಾಗತಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.







