ಕ್ರೀಡಾಪಟುಗಳ ಆರೋಗ್ಯ ಸಮಸ್ಯೆ ನಿರ್ವಹಿಸುವಲ್ಲಿ ಆಯುರ್ವೇದ ಮುಖ್ಯ ಪಾತ್ರ: ಡಾ.ಮಮತಾ ಕೆವಿ

ಉಡುಪಿ, ಮಾ.16: ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕ್ರೀಡಾಪಟುಗಳ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಆಯುರ್ವೇದ ಮುಖ್ಯ ಪಾತ್ರವಹಿಸುತ್ತದೆ. ಕ್ರೀಡೆಗೆ ಸಂಬಂಧಪಟ್ಟ, ಹೊರದೇಶಗಳಲ್ಲಿ ವಾಸಿಯಾಗದ ಕಾಯಿಲೆಗಳನ್ನು ಕೇರಳ ರಾಜ್ಯದ ಆಯುರ್ವೇದ ಚಿಕಿತ್ಸೆಗಳಿಂದ ನಿವಾರಿಸಲಾಗಿದೆ. ಹಾಗಾಗಿ ಸಂಸ್ಥೆಯ ಎಲ್ಲಾ ವಿಭಾಗಗಳಿಂದ ಅಲ್ಪಾವಧಿಯಲ್ಲೂ ಅತ್ಯಂತ ಸಂಕ್ಷಿಪ್ತ ರೀತಿಯಲ್ಲಿ ಮುಖ್ಯ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಮಾತನಾಡಿ, ವಿದ್ಯಾರ್ಥಿಗಳು ಸೈದ್ಧಾಂತಿಕ ಹಾಗು ಪ್ರಾಯೋಗಿಕ ಪಠ್ಯ ಕ್ರಮವನ್ನು ಕೂಲಂಕಷ ವಾಗಿ ತಿಳಿದು ತಮ್ಮ ಜೀವನ ಹಾಗೂ ಕಾರ್ಯಕ್ಷೇತ್ರ ದಲ್ಲಿ ಆಯುರ್ವೇದವನ್ನು ಅಳವಡಿಸಬೇಕೆಂದು ಕರೆ ನೀಡಿದರು.
ಅಂತಾರಾಷ್ಟ್ರೀಯ ವಿದ್ಯಾರ್ಥಿ ಕೋಶದ, ಅಸೋಸಿಯೇಟ್ ಡೀನ್ ಡಾ. ಅನಿರುದ್ಧ ತರಬೇತಿ ಕಾರ್ಯ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಂತಾ ರಾಷ್ಟ್ರೀಯ ವಿದ್ಯಾರ್ಥಿ ಕೋಶದ ಡೀನ್ ಡಾ.ಪ್ರಸನ್ನ ಮೊಗಸಾಲೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಸಹನಾ ಶಂಕರಿ ವಂದಿಸಿದರು. ವಿದ್ಯಾರ್ಥಿಗಳಾದ ಡಾ.ಷರಣ್ಯ ಹಾಗೂ ಡಾ.ಗೀತಾಂಜಲಿ ಪ್ರಾರ್ಥಿಸಿದರು. ಸ್ವಸ್ಥವೃತ್ತ ವಿಭಾಗದ ಡಾ.ಸೌಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.







