ಕಲಾವಿದರು ಯಕ್ಷಗಾನದ ಚೌಕಟ್ಟು, ಪರಂಪರೆ ಮುರಿಯಬಾರದು: ತಲ್ಲೂರು ಶಿವರಾಂ ಶೆಟ್ಟಿ

ಉಡುಪಿ, ಮಾ.16: ಯಕ್ಷಗಾನ ಇಂದು ಸಿನಿಮೀಯ ಶೈಲಿಯತ್ತ ವಾಲುತ್ತಿದ್ದು, ಈ ಮೂಲಕ ಅದರ ಮೌಲ್ಯ ಕುಸಿಯುತ್ತಿದೆ. ಕಲಾವಿದರು ಯಕ್ಷಗಾನದ ಚೌಕಟ್ಟು, ಪರಂಪರೆ ಮುರಿಯಬಾರದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಹೇಳಿದ್ದಾರೆ.
ಸಾಲಿಗ್ರಾಮ ಯಕ್ಷಗಾನ ಮೇಳ ಕೋಟ ಇದರ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ‘ಸುವರ್ಣ ಪರ್ವ-8’ ಹಾಗೂ ಮಕ್ಕಳ ಯಕ್ಷಗಾನ ರಂಗಭೂಮಿ’ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅರ್ಥಧಾರಿ ಡಾ.ಎಂ.ಪ್ರಭಾಕರ್ ಜೋಶಿ ಪ್ರಧಾನ ದಿಕ್ಸೂಚಿ ಭಾಷಣ ಮಾಡಿ, ಕಾರ್ಪೋರೇಟ್ ಸಂಸ್ಕೃತಿಯಿಂದಲೂ ದೇಶಕ್ಕೆ ಒಳಿತಾಗಲಿದೆ. ಹೀಗಾಗಿ ಈ ಸಂಸ್ಕೃತಿಯನ್ನು ವಿರೋಧಿಸಬಾರದು. ಮಕ್ಕಳೇ ಒಂದು ರಂಗಭೂಮಿ ಯಾಗಿದ್ದಾರೆ. ಹೀಗಾಗಿ ಅವರ ವಯಸ್ಸು, ಮನೋಭಾವ, ಸಂವೇದನೆಗೆ ಸರಿಹೊಂದುವ ಪಾತ್ರ ಹಾಗೂ ಕಥೆಯ ಸೃಷ್ಟಿಯಾಗಬೇಕು ಎಂದರು.
ಕಥೆಗಳ ಸಾಗರವೇ ಆಗಿರುವ ಪಂಚತಂತ್ರದ ಕಥೆಗಳನ್ನು ಯಕ್ಷಗಾನಕ್ಕೆ ತರಬೇಕು. ಯಕ್ಷಗಾನ ರಂಗಭೂಮಿ ಯಿಂದು ಬಹಮುಖಿ ಚಲನೆಯಲ್ಲಿದೆ. ಯಕ್ಷಗಾನದ ರಸಿಕತೆ ಸಿನಿಮೀಯವಾಗುತ್ತಿದೆ. ಭಯಕ್ಕೂ ರಸಿಕತೆಯ ಕುಣಿತ ಕಂಡುಬಂದರೆ ಆಭಾಸವಾಗುತ್ತದೆ. ಮಕ್ಕಳು, ದೊಡ್ಡವರು ಸೇರಿಕೊಂಡು ಯಕ್ಷಗಾನ ರಂಗಭೂಮಿಯನ್ನು ಬೆಳೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ 34 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಾಧಕ ಕೇಶವ್ ಬಡಾನಿಡಿಯೂರು ಅವರಿಗೆ ’ಸುವರ್ಣ ಪರ್ವ’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ವಹಿಸಿದ್ದರು.
ಕಲಾಪೋಷಕರಾದ ಸುರೇಶ್ ಪ್ರಭು, ಭುವನಪ್ರಸಾದ್ ಹೆಗ್ಡೆ, ವಿ.ಜಿ.ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಎಚ್.ಶ್ರೀಧರ್ ಹಂದೆ, ಅಧ್ಯಕ್ಷ ಬಲರಾಮ್ ಕಲ್ಕೂರ ಕೆ., ಉಪಾಧ್ಯಕ್ಷ ಎಚ್.ಜನಾರ್ದನ್ ಹಂದೆ ಉಪಸ್ಥಿತರಿದ್ದರು.
ಮೇಳದ ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನದಾಸ್ ಶ್ಯಾನಭಾಗ್ ಅತಿಥಿ ಗಳನ್ನು ಗೌರವಿಸಿದರು. ವಿನುತಾ ಎಸ್. ಹಂದೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಗಾನ ಗುರು ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ ಅಧ್ಯಕ್ಷತೆಯಲ್ಲಿ ಮಕ್ಕಳ ಯಕ್ಷಗಾನ ವಿಷಯ ಕುರಿತು ನಡೆದ ವಿಚಾರಗೋಷ್ಠಿ ಯಲ್ಲಿ ಪ್ರಸಂಗ ಸಾಹಿತಿ ಪ್ರೊ.ಶ್ರೀಧರ್ ಡಿ.ಎಸ್. ’ಪ್ರಸಂಗ ಸಾಹಿತ್ಯ’ ಕುರಿತು, ಯಕ್ಷಗರು ಪ್ರಸಾದಕುಮಾರ್ ಮೊಗಬೆಟ್ಟು ’ತರಬೇತಿಯ ಸವಾಲುಗಳು’ ಕುರಿತು, ರಂಗಕರ್ಮಿ ಅಭಿಲಾಷ್ ಎಸ್. ’ರಂಗ ಪ್ರಸ್ತುತತೆ’ ಕುರಿತು ವಿಚಾರ ಮಂಡಿಸಿದರು.
ತೆಕ್ಕಟ್ಟೆ ಯಶಸ್ವಿ ಕಲಾವೃಂದದ ಯಕ್ಷಗಾನ ಗುರು ದೇವದಾಸ್ ರಾವ್ ಕೊಡ್ಲಿ ಹಾಗೂ ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಪ್ರತಿಸ್ಪಂದನ ನಿರ್ವಹಿಸಿದರು. ತದನಂತರ ರಾಜೇಶ್ ಕಟೀಲು ನಿರ್ದೇಶನದಲ್ಲಿ ಶ್ರೀದುರ್ಗಾ ಮಕ್ಕಳ ಮೇಳ ಕಟೀಲು ಅವರಿಂದ ’ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.







