ದಲಿತರು ಇಂದಿಗೂ ಆರ್ಥಿಕ, ಸಾಮಾಜಿಕವಾಗಿ ಶೋಷಿತರು: ಡಾ.ಮಹಾಲಿಂಗು

ಉಡುಪಿ, ಮಾ.21: ದಲಿತರಿಗೆ ಇಂದು ರಾಜಕೀಯವಾಗಿ ಪ್ರಾತಿನಿಧ್ಯ ದೊರೆತರೂ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಿತರಾಗಿಯೇ ಉಳಿದಿದ್ದಾರೆ. ಪ್ರತಿಯೊಬ್ಬರೂ ಕಾನೂನು ಮತ್ತು ಸಂವಿಧಾನ ವನ್ನು ಅರಿತು ಕೊಂಡರೆ ಮಾತ್ರ ಅಸ್ಪೃಶ್ಯತೆಯನ್ನು ದೂರ ಮಾಡಬಹುದಾಗಿದೆ ಎಂದು ಸಾಹಿತಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ. ಮಾಹಾಲಿಂಗು ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಬನ್ನಂಜೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಆಯೋಜಿಸಲಾದ ಆಧುನಿಕ ಭಾರತದಲ್ಲಿ ಅಸ್ಪೃಶ್ಯತೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ವಿಚಾರ ಮಂಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಇಂದಿಗೂ ಜೀವಂತವಿದೆ. ಮೇಲ್ನೋಟಕ್ಕೆ ಕಾಣದಿದ್ದರೂ ಮೇಲ್ವರ್ಗದವರ ಮನಸ್ಸಿನೊಳಗೆ ಇಂದಿಗೂ ಕಡಿಮೆಯಾಗಿಲ್ಲ. ಈಗ ಆಧುನಿಕ ಅಸ್ಪೃಶ್ಯತೆ ಆರಂಭವಾ ಗಿದೆ. ನಾವು ಶಿಕ್ಷಿತರಾದರೂ ಅಧಿಕಾರದಲ್ಲಿದ್ದರೂ ನಮ್ಮನ್ನು ಧಮನಿಸಲಾಗುತ್ತದೆ. ಮಲ್ಪೆಯಲ್ಲಿ ದಲಿತ ಮಹಿಳೆಯ ಮೇಲೆ ನಡೆದಿರುವ ಅಮಾನುಷ ಹಲ್ಲೆಯು ಆಧುನಿಕ ಅಸ್ಪೃಶ್ಯತೆಗೆ ಉದಾಹರಣೆ ಎಂದರು.
ಇಂದು ಗಂಗಾಜಲವನ್ನು ಇಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ. ಅದೇ ಅತ್ಯಂತ ಪರಿಶುದ್ಧ ಎಂದು ಬಿಂಬಿಸಲಾಗುತ್ತಿದೆ. ಒಂದು ಕಾಲದಲ್ಲಿ ದಲಿತರಿಗೆ ಕುಡಿಯಲು ನೀರನ್ನು ಕೂಡ ಕೊಟ್ಟಿಲ್ಲ. ಅಂಬೇಡ್ಕರ್ ಸಂವಿಧಾನವನ್ನು ಕೊಡದಿದ್ದರೆ ದಲಿತರು ಇಂದಿಗೂ ಶಿಕ್ಷಣ ವಂಚಿತರಾಗಿ ಉಳ್ಳವರ ಮನೆ ಮುಂದೆ ದುಡಿಯಬೇಕಿತ್ತು ಎಂದು ಅವರು ಹೇಳಿದರು.
ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ನಾರಾಯಣಸ್ವಾಮಿ, ಚಿಂತಕ ಪ್ರೊ.ಫಣಿರಾಜ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ಮುಖಂಡರಾದ ಸುರೇಶ ಹಕ್ಲಾಡಿ, ರಾಜೇಂದ್ರ ಮಾಸ್ಟರ್, ಕುಂದಾಪುರ ತಾಲ್ಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಜಿಲ್ಲಾ ಸಮಿತಿ ಸದಸ್ಯರಾದ ಹರೀಶ್ಚಂದ್ರ ಬಿರ್ತಿ, ರಾಘವ ಬೆಳ್ಳೆ, ಶಿವಾನಂದ ಬಿರ್ತಿ, ದಲಿತ ಕಲಾ ಮಂಡಳಿಯ ಪ್ರಶಾಂತ್ ಬಿರ್ತಿ ಉಪಸ್ಥಿತರಿದ್ದರು.







