ಮಲ್ಪೆಯಲ್ಲಿ ದಲಿತ ಮಹಿಳೆಗೆ ಹಲ್ಲೆ ಪ್ರಕರಣ| ಘಟನೆ ತಿಳಿದ ಕೂಡಲೇ ಶಾಸಕರು ಬರಬೇಕಿತ್ತು: ಜಯಪ್ರಕಾಶ್ ಹೆಗ್ಡೆ

ಉಡುಪಿ, ಮಾ.21: ಮಲ್ಪೆಯಲ್ಲಿ ದಲಿತ ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣ ತಿಳಿದ ಕೂಡಲೇ ಉಡುಪಿ ಶಾಸಕರು ಇಲ್ಲಿಗೆ ಬರಬೇಕಾಗಿತ್ತು. ಉಡುಪಿಗೆ ಬಂದು ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸ ಬೇಕಾಗಿತ್ತು ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾತನಾಡಿದ ಅವರು, ಕಟ್ಟಿ ಹಾಕಿ ಹೊಡೆದಿರುವುದು ತಪ್ಪು. ಇದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಮೀನು ಕದ್ದ ಮಹಿಳೆಯನ್ನು ಹಿಡಿದು ಪೊಲೀಸರಿಗೆ ಕೊಡುವ ಬದಲು ಕಾನೂನು ಕೈಗೆ ತೆಗೆದುಕೊಂಡಿರುವುದು ಸರಿಯಲ್ಲ. ಮೀನುಗಾರರು ಸಮಸ್ಯೆಯಲ್ಲಿರುವಾಗ ಅದನ್ನು ಬಗೆಹರಿಸುವ ಜವಾಬ್ದಾರಿ ಮುಖಂಡರಾದ್ದಾಗಿದೆ. ಅದು ಬಿಟ್ಟು ಬೇರೆಯವರನ್ನು ದೂಷಣೆ ಮಾಡುವುದರಲ್ಲಿ ಅರ್ಥ ಇಲ್ಲ ಎಂದರು.
ವಿಡಿಯೋದಲ್ಲಿ ಇಲ್ಲದ ಅಮಾಯಕರ ಮೇಲೆ ಕೇಸು ದಾಖಲಿಸಿದ್ದರೆ ಮುಂದಿನ ತನಿಖೆಯಲ್ಲಿ ಕೈ ಬಿಡಲು ಅವಕಾಶ ಇದೆ. ಪ್ರತಿಭಟನೆ ನಡೆಸಿದರೂ ಇನ್ನು ಕೇಸು ವಾಪಾಸ್ಸು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದೆ ಕೋರ್ಟಿನಲ್ಲಿ ತೀರ್ಮಾನ ಆಗಬೇಕು. ಮುಂದೆ ಎಲ್ಲೂ ಇಂತಹ ಘಟನೆ ನಡೆಯಬಾರದು ಎಂದು ಅವರು ತಿಳಿಸಿದರು.
ಪ್ರತಿಭಟನೆ ಬೇಡ: ಪ್ರಸಾದ್‌ರಾಜ್ ಕಾಂಚನ್ ಮನವಿ
ಮೀನುಗಾರರ ಸಂಘದವರು ಮಾ.22ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಕೈಬಿಡ ಬೇಕೆಂದು ಮನವಿ ಮಾಡುತ್ತೇನೆ. ಇದೀಗ ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕಾದು ನೋಡುವ ಕಾರ್ಯ ಮಾಡಬೇಕು. ಅಮಾಯಕರಿಗೆ ಪೊಲೀಸರು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ತಿಳಿಸಿದ್ದಾರೆ.
ಬಂದರಿನಲ್ಲಿ ಸಿಸಿಟಿವಿ ಸೇರಿದಂತೆ ಸೌಲಭ್ಯಗಳ ಕೊರತೆಗಳಿವೆ ಎಂದು ಉಡುಪಿ ಶಾಸಕರು ಹೇಳಿದ್ದಾರೆ. ಇದನ್ನೆಲ್ಲ ಮಾಡಿಕೊಡುವುದು ಶಾಸಕರ ಜವಾಬ್ದಾರಿಯಾಗಿದೆ. ಜನರು ಇವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಲು. ಆಡಳಿತ ನಡೆಸಲು ಇವರಿಗೆ ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಅವರು ಸವಾಲು ಹಾಕಿದರು.
ಎಲ್ಲ ವಿಚಾರದಲ್ಲಿಯೂ ಕೋಮುಗಲಭೆ ಸೃಷ್ಠಿಸಲು ಯತ್ನಿಸುವ ನಮ್ಮ ಶಾಸಕರು ಜವಾಬ್ದಾರಿಯಿಂದ ವರ್ತಿಸಬೇಕು. ಜನರ ಸಮಸ್ಯೆಯನ್ನು ಬಗೆಹರಿಸಬೇಕು. ಈ ಘಟನೆ ನಡೆಯುವಾಗ ಅಧಿನೇಶನ ನಡೆಯುತ್ತಿದ್ದರೂ ಶಾಸಕರು ಆ ಬಗ್ಗೆ ಒಂದು ಮಾತು ಕೂಡ ಆಡಿಲ್ಲ ಎಂದು ಅವರು ಟೀಕಿಸಿದ್ದಾರೆ.







