ಬ್ರಹ್ಮಾವರ| ಸರಗಳ್ಳತನ ಪ್ರಕರಣ: ಓರ್ವ ಆರೋಪಿ ಸೆರೆ
ದ್ವಿಚಕ್ರ ವಾಹನ ಸಹಿತ ಚಿನ್ನಾಭರಣ ವಶಕ್ಕೆ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎರಡು ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಸಾಲಿಗ್ರಾಮದ ಕಾರ್ಕಡ ಮೂಲದ ಮಂಜುನಾಥ ಮಯ್ಯ (45) ಬಂಧಿತ ಆರೋಪಿ. ಈತನಿಂದ ಅಂದಾಜು 1 ಲಕ್ಷದ 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಮಾ.20 ರಂದು ಸಂಜೆ ವಯಡ್ತಾಡಿ ಗ್ರಾಮದ 57 ವರ್ಷದ ಮಹಿಳೆ ಮನೆಯ ಪಕ್ಕದ ಮನೆಗೆ ಕಾರ್ಯಕ್ರಮದ ನಿಮಿತ್ತ ತೆರಳುವಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಮಹಿಳೆಯ ಕುತ್ತಿಗೆಯಲ್ಲಿದ್ದ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಮಂದಾರ್ತಿ ಕಡೆಗೆ ವಾಹನದಲ್ಲಿ ತೆರಳಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ನಡೆದ ಒಂದೇ ದಿನದೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇನ್ನೊಂದು ಪ್ರಕರಣದ ತನಿಖೆಗಾಗಿ ಕಸ್ಟಡಿಗೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಎಸ್ಪಿ ಡಾ.ಅರುಣ್ ಕೆ., ಹೆಚ್ಚುವರಿ ಎಸ್ಪಿಯವರಾದ ಎಸ್.ಟಿ. ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ ನಿರ್ದೇಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ., ಕಾನೂನು&ಸುವ್ಯವಸ್ಥೆ ಪಿಎಸ್ಐ ಸುದರ್ಶನ್ ದೊಡ್ಡಮನಿ, ತನಿಖಾ ಪಿಎಸ್ಐ ಮಾಹಾಂತೇಶ ಜಾಬಗೌಡ, ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳಾದ ಇಮ್ರಾನ್, ಮಹಮ್ಮದ್ ಅಜ್ಮಲ್ ಹೈಕಾಡಿ, ಕಿರಣ್ ಕುಮಾರ್, ಸಿದ್ದಪ್ಪ, ಸಿಪಿಐ ಕಚೇರಿ ಸಿಬ್ಬಂದಿ ವಿಶ್ವನಾಥ ಶೆಟ್ಟಿ, ಜಿಲ್ಲಾ ಸಿಡಿಆರ್ ವಿಭಾಗದ ದಿನೇಶ ಇದ್ದರು.







