ಕರಾಟೆಪಟು, ನೃತ್ಯ ಕಲಾವಿದೆ ಪ್ರಣವಿ ಸುವರ್ಣ ರಾಜ್ಯಕ್ಕೆ ಟಾಪರ್!

ಉಡುಪಿ, ಎ.8: ಕರಾಟೆಪಟು ಹಾಗೂ ನೃತ್ಯ ಕಲಾವಿದೆಯಾಗಿರುವ ಉಡುಪಿ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಣವಿ ಎಚ್.ಸುವರ್ಣ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 595 (ಶೇ.99.17) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಆಗಿ ಮೂಡಿಬಂದಿದ್ದಾರೆ.
ಉಡುಪಿಯ ಬೈಲೂರು ನಿವಾಸಿ ಉದ್ಯಮಿ ಹರೀಶ್ ಕೆ.ಸುವರ್ಣ ಹಾಗೂ ಗೃಹಿಣಿ ನಮಿತಾ ಎಸ್.ಸುವರ್ಣ ದಂಪತಿ ಪುತ್ರಿ ಪ್ರಣವಿ ಸುವರ್ಣ, ಪ್ರಸ್ತುತ ಕರಾಟೆ ಹಾಗೂ ಭರತನಾಟ್ಯ ತರಬೇತಿಯನ್ನು ಪಡೆಯುತ್ತ ಈ ಸಾಧನೆ ಮಾಡಿದ್ದಾರೆ. ಇವರು ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದುಕೊಂಡಿದ್ದಾರೆ.
‘ತರಗತಿಯಲ್ಲಿ ಪಾಠವನ್ನು ಸರಿಯಾಗಿ ಗಮನ ಹರಿಸಿ ಕೇಳಿ ಮನನ ಮಾಡಿ ಕೊಳ್ಳುತ್ತೇನೆ. ಮನೆಯಲ್ಲಿ ಎರಡು ಗಂಟೆ ಓದುತ್ತೇನೆ. ಪರೀಕ್ಷೆಯ ಸಂದರ್ಭ ದಲ್ಲೂ ನೃತ್ಯ ಹಾಗೂ ಕರಾಟೆಗೆ ತರಬೇತಿ ಮಾಡಿದ್ದೇನೆ. ಕಾಲೇಜು ಹಾಗೂ ಮನೆಯವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಸಿಎ ಆಗಬೇಕೆಂಬ ಗುರಿ ಹೊಂದಿದ್ದೇನೆ’ ಎಂದು ಪ್ರಣವಿ ಸುವರ್ಣ ತಿಳಿಸಿದ್ದಾರೆ.





