ದೇವಳ, ಮಠಗಳ ಆಸ್ತಿ ಬಡ ಹಿಂದುಗಳಿಗೆ ಮೊದಲು ಹಂಚಿ: ಶ್ಯಾಮ್‌ರಾಜ್ ಬಿರ್ತಿ
ಉಡುಪಿ, ಎ.17: ವಕ್ಫ್ ಆಸ್ತಿಯನ್ನು ಬಡವರು, ನಿರ್ಗತಿಕ ಮಹಿಳೆಯರು ಹಾಗೂ ಮಕ್ಕಳ ಪ್ರಯೋಜನಕ್ಕೆ ಬಳಸಬಹುದಿತ್ತು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲಿಗೆ ಮಠ ಮತ್ತು ದೇವಸ್ಥಾನಗಳ ಆಸ್ತಿಯನ್ನು ಬಡ ಹಿಂದುಗಳಿಗೆ, ಹಿಂದೂ ನಿರ್ಗತಿಕ ಮಹಿಳೆಯರಿಗೆ, ದಲಿತರಿಗೆ, ಅಲೆಮಾರಿ ಬುಡಕಟ್ಟು ಜನರಿಗೆ ಹಂಚಿ ತಮ್ಮ ಹಿಂದೂ ಪ್ರೇಮ ಸಾಬೀತು ಪಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಸಂವಿಧಾನ ವಿರೋಧಿ ಎಂದು ಮೋದಿ ಹೇಳಿದ್ದಾರೆ. ಈ ದೇಶದ ಮುಂದವರಿದ ಜಾತಿಯವರು, ಬಲಾಢ್ಯರು, ಆಸ್ತಿವಂತರು, ದೇಶದ ಎಲ್ಲಾ ಪ್ರಮುಖ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಜನಸಂಖ್ಯೆಯಲ್ಲಿ ಕೇವಲ ಶೇ.3 ಇರುವ ಬ್ರಾಹ್ಮಣರಿಗೆ ಶೇ.10 ಮೀಸಲಾತಿ ಕಲ್ಪಿಸಿರುವುದು ಸಂವಿಧಾನ ವಿರೋಧಿ ಆಗುವುದಿಲ್ಲವೇ? ಅಂಬೇಡ್ಕರ್ ಮೀಸಲಾತಿ ಕಲ್ಪಿಸಿರುವುದು ಅಸ್ಪೃಶ್ಯತೆಯ ಕಾರಣಕ್ಕೆ ಮತ್ತು ಶೋಷಿತ ದಲಿತರಿಗೆ ಎಂದು ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.
ನಮ್ಮ ಪವಿತ್ರ ಹಬ್ಬವಾದ ಅಂಬೇಡ್ಕರ್ ಜಯಂತಿಯಂದು ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿ ಮಾಡುವುದು ಪ್ರಧಾನಿ ಘನತೆಗೆ ತಕ್ಕುದಲ್ಲ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.





