ಕೊಲ್ಲೂರು ಕೊರಗ ಮಹಿಳೆಗೆ ನ್ಯಾಯ ಒದಗಿಸಲು ಗಡುವು ಅನಿರ್ದಿಷ್ಟಾವಧಿ ಧರಣಿ: ಬೈಂದೂರು ಶಾಸಕ ಗಂಟಿಹೊಳೆ ಎಚ್ಚರಿಕೆ
ಕೊಲ್ಲೂರು, ಎ.21: ಕೊಲ್ಲೂರಿನಲ್ಲಿ ನ್ಯಾಯಾಲಯದ ಆದೇಶ ನೆಪದಲ್ಲಿ ಮಾನವೀಯತೆ ಇಲ್ಲದೇ ಕಳೆದ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದ ಸಮಾಜದಲ್ಲಿ ಅತೀ ನಿರ್ಲಕ್ಷಿತ ಹಾಗೂ ಸೂಕ್ಷ್ಮ ಸಮುದಾಯ ವಾದ ಕೊರಗ ಕುಟುಂಬದ ವಾಸ್ತವ್ಯದ ಮನೆಯನ್ನು ನಾಶ ಪಡಿಸಿರುವುದು ತೀರಾ ದುಃಖಕರ ಹಾಗೂ ದುರದೃಷ್ಟಕರ ಸಂಗತಿಯಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯೂ ಸೇರಿದಂತೆ ಈ ಪ್ರಕರಣವು ಈ ಹಂತದವರೆಗೆ ಬರುವಲ್ಲಿ ಜಿಲ್ಲಾಡಳಿತ ನಡೆದುಕೊಂಡ ರೀತಿ ತೀರಾ ಖಂಡನೀಯ. ಹಲವು ವರ್ಷಗಳಿಂದ ಆ ಕುಟುಂಬವು ವಿವಾದಿತ ಎಂದು ಬಿಂಬಿತವಾಗಿರುವ ಜಾಗದಲ್ಲಿ ವಾಸ್ತವ್ಯವಿದ್ದರೂ ಈ ಕುಟುಂಬಕ್ಕೆ ನ್ಯಾಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿದ್ದು, ಮಾನವೀಯತೆಯಿಲ್ಲದ ಇಡೀ ಮಾನವ ಸಮಾಜ ತಲೆ ತಗ್ಗಿಸುವ ಈ ಕೃತ್ಯಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆ ಎಂದು ಅವರು ಆರೋಪಿಸಿದ್ದಾರೆ.
ಕೊರಗ ಸಮುದಾಯವು ಹಲವು ದಶಕಗಳಿಂದ ಅತ್ಯಂತ ನಿರ್ಲಕ್ಷಿತ ಹಾಗೂ ದಿನದಿಂದ ದಿನಕ್ಕೆ ನಶಿಸುತ್ತಿರುವ ಜನಾಂಗವಾಗಿದ್ದು ಪ್ರತಿ ಕುಟುಂಬದ ಪ್ರತಿಯೊಂದು ಹಂತದ ಕಾಳಜಿ ವಹಿಸಿ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯ ಒದಗಿಸುವ ಜವಾಬ್ದಾರಿ ಇಲಾಖೆಗೆ ಇದ್ದು ಎಲ್ಲರ ಕಣ್ಣೆದುರಿಗೆ ಇಂತಹ ಘಟನೆ ನಡೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ನೊಂದ ಕುಟುಂಬಕ್ಕೆ ಕೂಡಲೇ ಮೂರು ದಿನಗಳ ಒಳಗೆ ಪರಿಹಾರ ನೀಡಬೇಕು ಹಾಗೂ ಸೂಕ್ತವಾದ ಜಾಗ ಮಂಜೂರು ಮಾಡಿ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಇಲ್ಲವಾದರೆ ಬೇಡಿಕೆ ಈಡೇರುವವರೆಗೆ ನೊಂದ ಕೊರಗ ಕುಟುಂಬದ ಬಂಧುಗಳೊಂದಿಗೆ ಧರಣಿ ಕೂರಲಾಗುವುದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







