ಜನಿವಾರ ಪ್ರಕರಣ: ಉಡುಪಿ ಬ್ರಾಹ್ಮಣ ಸಂಘಟನೆಗಳ ಖಂಡನೆ

ಉಡುಪಿ, ಎ.22: ಇತ್ತೀಚೆಗೆ ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಯ ವೇಳೆ ಕೆಲವು ಪರೀಕ್ಷಾ ಕೇಂದ್ರ ಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯನ್ನು ಉಡುಪಿ ಜಿಲ್ಲೆಯ ಸಮಸ್ತ ಬ್ರಾಹ್ಮಣ ಸಂಘಟನೆಗಳು ಖಂಡಿಸಿವೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ರಾಜ್ಯದಲ್ಲಿ ನಾಲ್ಕು ಜಿಲ್ಲೆಗಳಲ್ಲಿ (ಶಿವಮೊಗ್ಗ, ಬೀದರ್, ಧಾರವಾಡ, ಸಾಗರ) ಜನಿವಾರ ತೆಗೆಸಿದ ಘಟನೆಗಳು ಬೆಳಕಿಗೆ ಬಂದಿವೆ. ಇನ್ನು ಎಲ್ಲೆಲ್ಲಿ ಇಂಥ ಘಟನೆಗಳು ನಡೆದಿವೆಯೋ ಗೊತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಇದುವರೆಗೆ ಆಗದೇ ಇದ್ದ ಈ ಹೀನಕೃತ್ಯ ಇದೀಗ ಆಗಲು ಕಾರಣವೇನು. ಇದರ ಹಿಂದೆ ಯಾವ ದುರುದ್ದೇ ಶವಿದೆ ಎಂಬುದು ತಿಳಿಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ತಾಮಸಿಕ ಮನೋಸ್ಥಿತಿ ನಿರ್ಮಾಣವಾಗುತ್ತಿ ರುವುದು ದೇಶದ ಅಖಂಡತೆಗೆ ಮಾರಕ ಎಂದವರು ಹೇಳಿದರು.
ಈಗ ಬ್ರಾಹ್ಮಣ ಸಮಾಜದ ನೈತಿಕತೆ ಮೇಲೆ ಕ್ರೌರ್ಯ, ದಬ್ಬಾಳಿಕೆ ಮಿತಿಮೀರಿದ ವಾತಾವರಣ ನಿರ್ಮಾಣ ವಾಗುತ್ತಿದೆ ಸರಕಾರ ಈಗಲಾದರೂ ಎಚ್ಚೆತ್ತು ಎಂಥ ದುರ್ಘಟನೆಗಳು ಪುನರಾವರ್ತಿನೆ ಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸರಕಾರ ಪರೀಕ್ಷಾ ವಂಚಿತ ಎಲ್ಲಾ ವಿದ್ಯಾರ್ಥಿಗಳಿಗೆ ಪುನಹ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಅವರ ಭವಿಷ್ಯಕ್ಕೆ ನೆರವಾಗಬೇಕು. ಅಲ್ಲದೇ ದಬ್ಬಾಳಿಕೆ ತೋರಿದ ಅಧಿಕಾರಿಗಳಿಗೆ ಉಗ್ರ ಶಿಕ್ಷೆಯಾಗು ವಂತೆ ನೋಡಿ ಕೊಳ್ಳಬೇಕು. ಇಲ್ಲದಿದ್ದರೆ ಸಮಸ್ತ ವಿಪ್ರ ಸಮಾಜ ಸನಾತನ ಹಿಂದೂ ಧರ್ಮದವರೊಂದಿಗೆ ಸೇರಿ ಉಗ್ರ ಹೋರಾಟಕ್ಕೆ ಮುಂದಾಗಲು ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್‌ಕುಮಾರ್, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ಅಧ್ಯಕ್ಷ ಚಂದ್ರಕಾಂತ್ ಭಟ್, ತುಳು ಶಿವಳ್ಳಿ ಮಾಧ್ವ ಮಹಾಮಂಡಳಿಯ ಜಯರಾಮ ಆಚಾರ್ಯ, ಜಿಲ್ಲಾ ಸ್ಥಾನಿಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಣೇಶ ಹೆಬ್ಬಾರ್, ಮಂಜುನಾಥ ಹೆಬ್ಬಾರ್, ಕೂಟ ಮಹಾಜಗತ್ತಿನ ಅಧ್ಯಕ್ಷ ವೈ.ಗಣೇಶ್, ಕರಾಡ ಬ್ರಾಹ್ಮಣ ಸಮಾಜದ ಪಾಂಡುರಂಗ ಲಾಗ್ವನ್‌ಕರ್ ಉಪಸ್ಥಿತರಿದ್ದರು.







