ಪಾರ್ದಾನಗಾರ್ತಿ ಅಪ್ಪಿ ಕೃಷ್ಣ ಪಾಣಾರಗೆ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ
ಶಿರ್ವ, ಎ.22: ಮೂಡುಬೆಳ್ಳೆ ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೆಳ್ಳೆ ಕಾಡಬೆಟ್ಟು ಶ್ರೀಪಂಜಿರ್ಲಿ ದೈವಸ್ಥಾನದ ಪ್ರಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೂಡುಬೆಳ್ಳೆಯ ಹಿರಿಯ ಪಾರ್ದಾನಗಾರ್ತಿ ಅಪ್ಪಿಕೃಷ್ಣ ಪಾಣಾರ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತ ನಾಡಿ, ಜಾನಪದ ಇಲ್ಲದ ಜಾಗವೇ ಇಲ್ಲ. ಜಾನಪದದಲ್ಲಿ ನಾಡು, ನುಡಿ, ಸಂಸ್ಕೃತಿ ಕಟ್ಟುವುದರಲ್ಲಿ ಸಾಹಿತ್ಯ ವನ್ನು ಉಳಿಸುವುದೇ ಅಕಾಡೆಮಿಯ ಕೆಲಸವಾಗಿದೆ. ಊರಿಂದ ಊರಿಗೆ, ಬಾಯಿಂದ ಬಾಯಿಗೆ ಸತ್ಯವನ್ನು ಕಕ್ಕಿದ್ದು ಜನಪದ. ಇದು ಬದುಕನ್ನು ಕಲಿಸುವ ಪದ. ನಾವು ಪ್ರಕೃತಿಯ ಅವಿಭಾಜ್ಯ ಅಂಗ. ಬೀದರ್‌ನಲ್ಲಿ ಜರುಗಿದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಯೋ ಸಮಸ್ಯೆಯಿಂದ ಬರಲು ಅಸಾಧ್ಯವಾದ ಸಾಧಕರಿಗೆ ಅಕಾಡೆಮಿ ಅವರ ಮನೆಗೆ ಹೋಗಿ ಗೌರವಿಸುತ್ತಿದೆ ಎಂದು ತಿಳಿಸಿದರು.
ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಮಾತನಾಡಿ, ಬಾಯಿಯಿಂದ ಬಾಯಿಗೆ ಹರಿದು ಬಂದ ಸತ್ ಸಂಪ್ರದಾಯ ಗೀತೆಗಳಾದ ಪಾಡ್ದಾನಗಳು ಈ ನಾಡಿನ ಭವ್ಯ ಜಾನಪದ ಇತಿಹಾಸವನ್ನು ತಿಳಿಸುತ್ತವೆ. ಪಾಣಾರ ಸಮುದಾಯ ಈ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಶಾಶ್ವತವಾಗಿ ಉಳಿಸುವ ಕಾರ್ಯ ನಡಯಬೇಕು. ಪಾಡ್ದಾನಗಳು ಗ್ರಂಥಸ್ಥವಾಗಿ ಮುಂದಿನ ಪೀಳಿಗೆಗೆ ಸಿಗುವಂತಾಗಬೇಕು ಎಂದು ಹೇಳಿದರು.
ತಹಶೀಲ್ದಾರ್ ಡಾ.ಪ್ರತಿಭಾ ಆರ್., ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗ್ಲೆ, ಗ್ರಾಮ ಸಹಾಯಕ ನ್ಯಾನ್ಸಿ ಡಿಸೋಜ, ಸಮಾಜ ಸೇವಕ ಸುಂದರ, ಜಾನಪದ ವಿದ್ವಾಂಸ ಎಸ್.ಎ.ಕೃಷ್ಣಯ್ಯ, ಅಂಗನವಾಡಿ ಕಾರ್ಯಕರ್ತೆ ಸುನೀತಾ ಪೂಜಾರಿ ಅವರನ್ನು ಸನ್ಮಾನಿಸ ಲಾಯಿತು. ಅಧ್ಯಕ್ಷತೆಯನ್ನು ಮೂಡುಬೆಳ್ಳೆ ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ವಹಿಸಿದ್ದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಭ ಹಾರೈಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ, ಅಕಾಡೆಮಿಯ ವಲಯ ಸಂಯೋಜಕ ಡಾ.ಜಮೀರುಲ್ಲಾ ಶರೀಫ್, ಬೆಳ್ಳೆ ಗ್ರಾಪಂ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಪಾಣಾರ ಸಂಘದ ಗೌರವ ಅಧ್ಯಕ್ಷ ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಮಾಜಿ ತಾಪಂ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಉದ್ಯಮಿ ವಿನ್ಸೆಂಟ್ ಫರ್ನಾಂಡಿಸ್ ಬೆಳ್ಳೆ, ಬೆಳ್ಳೆ ಸೊಸೈಟಿ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಸುಧಾಕರ ಪೂಜಾರಿ, ರಂಜನಿ ಹೆಗ್ಡೆ, ರಾಜೇಂದ್ರ ಶೆಟ್ಟಿ, ಮಾಜಿ ತಾಪಂ ಸದಸ್ಯೆ ಸುಜಾತಾ ಸುವರ್ಣ, ಪಳ್ಳಿ ಸೊಸೈಟಿ ನಿರ್ದೇಶಕ ದಯಾನಂದ ಶೆಟ್ಟಿ ಪಠೇಲ್‌ಮನೆ, ಪಾಣಾರ ಸಂಘ ಉಡುಪಿ ಜಿಲ್ಲಾ ಅಧ್ಯಕ್ಷ ಪಂಡುರಂಗ ಪಡ್ಡಾಮ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಾಣಾರ ಸಂಘ ಜಿಲ್ಲಾ ಸಮಿತಿಯ ಸುಕೇಶ್, ಸಂಜೀವ ಪಡ್ಡಾಮ, ಗ್ರಾಪಂ ಸದಸ್ಯ ಗುರುರಾಜ್ ಭಟ್ ಉಪಸ್ಥಿತರಿದ್ದರು.
ಬೆಳ್ಳೆ ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







