ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ: ಮುಸ್ಲಿಂ ಬಾಂಧವ್ಯ ವೇದಿಕೆ ಖಂಡನೆ
ಉಡುಪಿ, ಎ.23: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಇದು ಅತ್ಯಂತ ಹೇಯ ಮತ್ತು ಹೀನ ಕೃತ್ಯವಾಗಿದ್ದು ಸಮಸ್ತ ನಾಗರಿಕ ಸಮಾಜದ ಮೇಲೆ ನಡೆದ ದಾಳಿ ಯಾಗಿದೆ. ಈ ಕೃತ್ಯದ ಹಿಂದೆ ಯಾವುದೇ ಶಕ್ತಿ ಅಥವಾ ಅದೆಷ್ಟೇ ದೊಡ್ಡ ವ್ಯವಸ್ಥೆಗಳೇ ಇರಲಿ ಅವುಗಳ ವಿರುದ್ಧ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಕೃತ್ಯಗಳನ್ನು ಯಾವುದೇ ಸಮುದಾಯ ಮತ್ತು ಸಮೂಹಕ್ಕೆ ಅಂಟಿಸದೆ ಮುಂದೆ ಘಟಿಸದಂತೆ ನೋಡಿ ಕೊಳ್ಳಬೇಕಾಗಿದೆ.
ಧರ್ಮದ ಹೆಸರಿನಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳಿಗೆ ಸುದೀರ್ಘ ಇತಿಹಾಸವಿದ್ದು ಜಾತಿ, ಧರ್ಮ, ದೇಶ, ಭಾಷೆಗಳ ಭೇದವಿಲ್ಲದೆ ಸಮಾಜದ ಎಲ್ಲರೂ ಇದಕ್ಕೆ ಬಲಿಪಶುಗಳಾಗಿದ್ದಾರೆ. ಹಾಗೆಯೇ, ಯಾವುದೇ ಭೇದವಿಲ್ಲದೆ ಇದರ ವಿರುದ್ಧ ಹೋರಾಡಿದ್ದಾರೆ. ಇಂಥ ಭಯೋತ್ಪಾದನಾ ಕೃತ್ಯಗಳಿಂದಾಗಿ ಸಮುದಾಯಗಳ ನಡುವೆ ಮತ್ತಷ್ಟು ಅಂತರ ಮೂಡದಂತೆ ರಾಜಕೀಯ ಧಾರ್ಮಿಕ ಮತ್ತು ಸಾಮಾಜಿಕ ವಲಯದಲ್ಲಿರುವ ಪ್ರಜ್ಞಾವಂತರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ವೇದಿಕೆಯ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







