ಸರಕಾರಿ ಶಾಲೆಗಳ ಸಮೀಪ ರಸ್ತೆ ಸುರಕ್ಷತಾ ಕ್ರಮದ ಅಭಿಯಾನ

ಕುಂದಾಪುರ, ಎ.28: ಸರಕಾರಿ ಶಾಲೆಗಳು ಉಳಿದು, ಬೆಳೆಯಬೇಕೆಂಬ ಧ್ಯೇಯೋದ್ಧೇಶದಿಂದ ಹುಟ್ಟಿ ಕೊಂಡ ಶಾಲಾಭಿವೃದ್ಧಿ ಸಮಿತಿ(ಎಸ್.ಡಿ.ಎಂ.ಸಿ) ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುಂದಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಭಾಗದ ಹಂಪ್ಸ್‌ಗೆ ಬಣ್ಣ ಬಳಿ ಯುವ ಮೂಲಕ ಕುಂದಾಪುರ ಸಂಚಾರ ಠಾಣೆ ಎಸ್ಸೈ ಪ್ರಸಾದ್ ಕುಮಾರ್ ಕೆ., ಹೆಡ್ ಕಾನ್ಸ್ಟೇಬಲ್ ಪ್ರಶಾಂತ್ ಪೂಜಾರಿ ಚಾಲನೆ ನೀಡಿದರು.
ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಮಾತನಾಡಿ, ಗುಣಮಟ್ಟದ ಶಿಕ್ಷಣ, ಸರಕಾರಿ ಶಾಲೆಗೆ ಮೂಲಸೌಕರ್ಯಗಳನ್ನು ಒದಗಿಸುವುದು ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ಕೇಂದ್ರದ ಉದ್ದೇಶ ವಾಗಿದೆ. ಈ ಬಾರಿ ಸಂಸ್ಥಾಪನ ದಿನಾಚರಣೆ ಹಿನ್ನೆಲೆ ಉಡುಪಿ ಜಿಲ್ಲಾದ್ಯಂತ 675 ಶಾಲೆಗಳ ಎಸ್.ಡಿ.ಎಂ.ಸಿ.ಗೆ ಮಾಹಿತಿ ನೀಡಿದ್ದು ಪ್ರತಿ ಶಾಲೆ ಸಮೀಪದ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕಾರ್ಯ ಆಯಾಯ ಶಾಲೆ ಎಸ್‌ಡಿಎಂಸಿ, ಪೋಷಕರು ಹಾಗೂ ಸ್ಥಳೀಯರ ಮುತುವರ್ಜಿಯಲ್ಲಿ ನಡೆಯಲಿದೆ. ಮಕ್ಕಳ ಹಾಗೂ ವಾಹನ ಸವಾರರ ಸುರಕ್ಷತೆ ನಿಟ್ಟಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ.ನಾಗರಾಜ್, ಪುರಸಭೆ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಬೈಂದೂರು ತಾಲೂಕು ಅಧ್ಯಕ್ಷ ಸಾಧಿಕ್ ಮಾವಿನಕಟ್ಟೆ, ಕಾಪು ತಾಲೂಕು ಉಸ್ತುವಾರಿ ಅಶ್ಫಕ್ ಮೊದಲಾದವರು ಉಪಸ್ಥಿತರಿದ್ದರು.







