ಕೇವಲ ಭಾಷಾಭಿಮಾನದಿಂದ ಮಾತ್ರ ಸಾಹಿತ್ಯಾಭಿವೃದ್ಧಿ ಸಾಧ್ಯವಿಲ್ಲ: ಡಾ.ಪಾದೆಕಲ್ಲು ವಿಷ್ಣುಭಟ್
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ

ಉಡುಪಿ, ಎ.30: ಭಾಷಾಭಿಮಾನ ಎಲ್ಲರಿಗೂ ಬೇಕು. ಆದರೆ ಕೇವಲ ಭಾಷಾಭಿಮಾನದಿಂದ ಮಾತ್ರ ಸಾಹಿತ್ಯ ಅಭಿವೃದ್ಧಿ ಸಾಧ್ಯ ಇಲ್ಲ. ಸಾಹಿತ್ಯದಲ್ಲಿ ಸತ್ತ್ವ ಇರಬೇಕಾದರೆ ಅಧ್ಯಯನ ಅಗತ್ಯ. ಅಧ್ಯಯನ- ಚಿಂತನೆಗಳಲ್ಲದ ಕೇವಲ ಅಭಿಮಾನ ಯಾವ ಪುರುಷಾರ್ಥವನ್ನೂ ಸಾಧಿಸಲಾರದು. ಈ ಬಗ್ಗೆ ನಾವು ಚಿಂತಿಸಬೇಕಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಪಾದೇಕಲ್ಲು ವಿಷ್ಣು ಭಟ್ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಎರಡು ದಿನಗಳ ಉಡುಪಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಕೃತಿ’ ಉದ್ಘಾಟನಾ ಸಮಾರಂಭದ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತಿದ್ದರು.
ಅಭಿಮಾನ ಎಂಬುದು ಕೇವಲ ಭಾವನೆಗೆ-ಭಾವನಾ ಪ್ರಪಂಚಕ್ಕೆ ಸಂಬಂಧಿಸಿ ವಿಷಯವಾಗಿದೆ. ಸಾಹಿತ್ಯ ಸೃಷ್ಠಿಯಲ್ಲಿ, ಸಾಹಿತ್ಯಾಭಿವೃದ್ಧಿಯ ಹಿನ್ನೆಲೆಯಲ್ಲಿ ಇರುವುದು ಕೇವಲ ಭಾವನಾ ವ್ಯಾಪಾರ ಅಲ್ಲ. ಚಿಂತನೆ ಮತ್ತು ಬೌದಜ್ಧಿಕ ವ್ಯಾಪಾರ ಇಲ್ಲದ ಸಾಹಿತ್ಯವು ಗಟ್ಟಿ ಸಾಹಿತ್ಯ ಆಗಬಹುದೇ ಎಂಬುದನ್ನು ಚಿಂತಿಸಬೇಕಿದೆ ಎಂದರು.
ಕೋಟ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ಮೊದಲಾದ ಸೀಮಿತ ಸಂಖ್ಯೆಯ ಲೇಖಕರನ್ನು ಹೊರತು ಪಡಿಸಿ ಗಮನಾರ್ಹವಾಗದ ಕೊಡುಗೆಗಳನ್ನು ಕೊಟ್ಟ ಸಾಹಿತಿ- ಬರಹಗಾರರ ಸಮಗ್ರ ಸಂಪುಟ ಗಳ ಪ್ರಕಟಣೆ ಆಗಬೇಕಾಗಿದೆ. ಇದರಿಂದ ಆಯಾ ಲೇಖಕರ ಎಲ್ಲ ಕೃತಿಗಳು ಒಂದೆಡೆ ದೊರಕುವುದು ಮಾತ್ರವಲ್ಲ ಸಾಹಿತ್ಯ ಲೋಕದಲ್ಲಿ ಅವರ ಸ್ಥಾನ ನಿರ್ಣಯಕ್ಕೂ ಸಹಕಾರಿ ಯಾಗುತ್ತದೆ. ಇದರಿಂದ ಪ್ರಾದೇಶಿಕ ಸಾಹಿತ್ಯದ ಮಹತ್ವವನ್ನು ತಿಳಿಯಲು ವಿಮರ್ಶಕರು ಹಾಗೂ ಸಂಶೋಧಕರಿಗೆ ಅನುಕೂಲ ವಾಗುತ್ತದೆ. ಆ ನಿಟ್ಟಿನಲ್ಲಿ ಈ ಕಾರ್ಯ ಅಗತ್ಯವಾಗಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಾಯಿನುಡಿ ಮಾತೃಭಾಷೆ ಎಂದು ಘೋಷಣೆ ಕೂಗಿದರೆ ಭಾಷೆ ಉದ್ಧಾರ ಆಗಲ್ಲ. ನಮ್ಮ ಮನೆಗಳಲ್ಲಿ ನಮ್ಮ ಮಾತು ಮರೆಯಾಗದಂತೆ ಪ್ರಯತ್ನ ನಡೆಯ ಬೇಕು. ಈಗ ಓದುವ ವಾತಾವರಣವೇ ಇಲ್ಲ ಎಂಬುದು ಎಲ್ಲ ಆಕ್ಷೇಪಣೆ. ಇದಕ್ಕೆ ಹೊಸ ತಲೆಮಾರಿನವರು ಮಾತ್ರ ಕಾರಣವಲ್ಲ. ಹಿರಿಯರೂ ಕೂಡ ಕಾರಣ ರಾಗಿದ್ದಾರೆ. ಕೇವಲ ಅಂಕ ಗಳಿಸುವುದೇ ಗುರಿ ಮಾಡಿ ಯುವ ಜನತೆಗೆ ಸಾಹಿತ್ಯಾಸಕ್ತಿ ಮೂಡ ದಂತೆ ಮಾಡಲಾಗಿದೆ. ಇದಕ್ಕೆ ನಮ್ಮ ದೃಷ್ಠಿ ಧೋರಣೆಗಳನ್ನು ಪರಿಷ್ಕರಿಸಿ ಬದಲಾಯಿಸಿಕೊಂಡು ಮುಂದುವರೆದರೇ ಮಾತ್ರ ಪರಿಹಾರ ಸಿಗಲು ಸಾಧ್ಯ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಆಶಯ ನುಡಿಗಳನ್ನಾಡಿ, ದಾಸ ಮತ್ತು ವಚನ ಸಾಹಿತ್ಯಗಳು ಕನ್ನಡ ಸಾಹಿತ್ಯದ ಎರಡು ಕಣ್ಣುಗಳು. ನಾವು ಎಲ್ಲರು ಕನ್ನಡದಲ್ಲಿ ಸಹಿ ಮಾಡುವ ಮೂಲಕ ಕನ್ನಡ ರಾಯ ಭಾರಿಗಳಾಗಲು ಸಾಧ್ಯ. ಕನ್ನಡ ಭಾಷೆ ಪರಿಪೂರ್ಣವಾದ ಭಾಷೆಯಾಗಿದೆ. ಕುಲ ಎನ್ನದೇ ನಾವೆಲ್ಲ ಮನುಕುಲವನ್ನು ಕಟ್ಟುವ ಕಾರ್ಯ ಮಾಡಬೇಕು ಎಂದರು.
ಯಾವುದೇ ಕನ್ನಡ ಶಾಲೆಗಳು ಮುಚ್ಚಬಾರದು ಮತ್ತು ಕನ್ನಡ ನಮ್ಮ ಅನ್ನದ ಭಾಷೆಯಾಗಬೇಕೆಂಬ ಕನಸು ಇನ್ನೂ ನಸಾಗಿಲ್ಲ. ಅಂತಹ ಯಾವುದೇ ಲಕ್ಷ್ಮಣಗಳು ಕೂಡ ಕಂಡು ಬರುತ್ತಿಲ್ಲ. ಯಾಕೆಂದರೆ ಈ ವಿಚಾರದಲ್ಲಿ ನಮಗೆ ನ್ಯಾಯಾಲಯದಿಂದಲೂ ಹಿನ್ನಡೆಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಪ್ರಭಾವದಿಂದ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಿದರೂ ಮುನೆಯಲ್ಲಿ ಮಾತ್ರ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತ ನಾಡಿ, ಸಾಹಿತ್ಯ ಸಮ್ಮೇಳನ ಸಾರ್ಥಕ ಆಗಬೇಕಾದರೆ ಹಿತದಿಂದ ಸಹಿತ ವಾದ ಸಾಹಿತ್ಯ ಆಗಬೇಕು. ಕೇವಲ ಬೌದ್ಧಿಕ ಸಂಪತ್ತಿನಿಂದ ಜೀವನ ಪರಿಪೂರ್ಣ ಆಗುವುದಿಲ್ಲ. ವ್ಯಕಿಯ ವಿಕಸನ ಆಗಬೇಕಾದರೆ ಸಾಹಿತ್ಯ ಎಂಬುದು ಅತೀ ಮುಖ್ಯವಾಗಿದೆ. ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ಸಂಪತ್ತೇ ನಿಜವಾದ ಜೀವನ ಎಂದು ಹೇಳಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ಸಮ್ಮೇಳನದ ಧ್ವಜವನ್ನು ಹಸ್ತಾಂತರಿಸಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣಗೊಳಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಉದ್ಯಮಿ ಆನಂದ ಸಿ. ಕುಂದರ್, ಮಾಜಿ ಶಾಸಕ ರಘುಪತಿ ಭಟ್, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧಕರ ಡಾ.ಅರುಣ್ ಕುಮಾರ್ ಎಸ್.ಆರ್. ಸಮ್ಮೇಳನಾಧ್ಯಕರ ಪರಿಚಯ ಮಾಡಿದರು. ಸಂಘಟನಾ ಕಾರ್ಯದರ್ಶಿ ಪಿ.ವಿ. ಆನಂದ ಸಾಲಿಗ್ರಾಮ ವಂದಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನಾ ರಾಷ್ಟ್ರ ಧ್ವಜಾರೋಹಣವನ್ನು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಪರಿಷತ್ ಧ್ವಜಾರೋಹಣವನ್ನು ನೀಲಾವರ ಸುರೇಂದ್ರ ಅಡಿಗ ನೆರವೇರಿಸಿದರು. ಗೀತಾ ಮಂದಿರದಿಂದ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು.
‘ಸಾಹಿತ್ಯ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಿ’
ಹಳ್ಳಿಗಳ ಐತಿಹ್ಯಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು ಅವಶ್ಯವಾಗಿ ಆಗಬೇಕಾದ ಇತಿಹಾಸದ ಮತ್ತು ಸಾಹಿತ್ಯ ಕೆಲಸ. ಕನ್ನಡ ಸಾಹಿತ್ಯ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು. ಅದಕ್ಕೆ ಹೊಂದಿ ಕೊಂಡು ಹೊಸ ಸಾಹಿತ್ಯ ಸೃಷ್ಟಿಯಾಗುವುದು ಅನಿವಾರ್ಯವಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದ ಅಧ್ಯಯನ ಕ್ಷೇತ್ರದಲ್ಲಿ ಆದ ಅನುಕೂಲ, ದಾಖಲೀಕರಣ, ಅಭಿವೃದ್ಧಿ, ಜ್ಞಾನ ವಿಸ್ತಾರ ಅಗಾಧವಾದುದು ಎಂದು ಸಮ್ಮೇಳನಾಧ್ಯಕ್ಷ ಡಾ.ಪಾದೇಕಲ್ಲು ವಿಷ್ಣು ಭಟ್ ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳ ಭಾಷಣ ಗಳನ್ನು ಸೇರಿಸಿಕೊಂಡು ಸಂಪುಟಗಳನ್ನು ರಚಿಸಬೇಕು. ಈ ರೀತಿ ಭಾಷಣಗಳನ್ನು ದಾಖಲಿಸುವುದರೊಂದಿಗೆ ಸಾಹಿತಚ್ಯ ಲೋಕದ ಪ್ರತಿನಿಧಿಗಳಾಗಿ ಅಧ್ಯಕ್ಷರುಗಳ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ. ಅದಕ್ಕಾಗಿ ಈ ಭಾಷಣಗಳ ಲಿಖಿತ ರೂಪಗಳನ್ನು ಓದಿ ಮನನ ಮಾಡುವುದು ಮುಖ್ಯ ಎಂದು ಅವರು ಹೇಳಿದರು.
ಉಡುಪಿ ತಾಲೂಕು ಘಟಕಕ್ಕೆ ಆಮಂತ್ರಣ ಇಲ್ಲ: ಆರೋಪ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಳುಹಿಸದೆ ಮತ್ತು ನಮ್ಮನ್ನು ವೇದಿಕೆಗೆ ಕರೆಯದೆ ಕಸಾಪ ಉಡುಪಿ ತಾಲೂಕು ಘಟಕಕ್ಕೆ ಅವಮಾನ ಹಾಗೂ ಅನ್ಯಾಯ ಮಾಡಲಾ ಗಿದೆ. ಆದರೂ ಸಮ್ಮೇಳನಕ್ಕೆ ಹೋದ ನನಗೆ ಜಿಲ್ಲಾ ಗೌರವ ಕಾರ್ಯದರ್ಶಿ ಏಕವಚನದಲ್ಲಿ ಮೂದಲಿಸಿ, ಅವಾಚ್ಯ ಶಬ್ದಗಳಿಂದ ವ್ಯಕ್ತಿ ಗೌರವಕ್ಕೆ ಕುಂದು ತೋರಿರುತ್ತಾರೆ. ಇದನ್ನು ಉಡುಪಿ ತಾಲೂಕು ಘಟಕ ಖಂಡಿಸುತ್ತದೆ ಎಂದು ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ತಿಳಿಸಿದ್ದಾರೆ.
ಈ ಹಿಂದೆ ತಮ್ಮನ್ನು ಉಡುಪಿ ತಾಲೂಕಿನ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡಿ ಕೊಂಡು ಹೋಗ ಬೇಕೆಂದು ಉಡುಪಿ ಕ.ಸಾ.ಪ ಜಿಲ್ಲಾಧ್ಯಕ್ಷರಿಗೆ ಈಗಾಗಲೇ ನೋಟಿಸು ನೀಡಿದೆ. ಆದರೂ ಆಮಂತ್ರಣ ಪತ್ರ ಕಳುಹಿಸದೆ ಹೈಕೋರ್ಟ್ ಆದೇಶ ಮೀರಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿಯವರನ್ನು ಪ್ರಶ್ನಿಸಿದಾಗ, ತಾಲೂಕು ಅಧ್ಯಕ್ಷರನ್ನು ಶಿಫಾರಸ್ಸು ಮಾಡಿದಂತೆ ನಾವು ಮುಂದಿನ ಆದೇಶದ ವರೆಗೆ ನೇಮಕ ಮಾಡಿದ್ದೇನೆ. ಆದರೆ ಹೈಕೋರ್ಟ್ ನಲ್ಲಿ ನನ್ನನ್ನೇ ಪಾರ್ಟಿ ಮಾಡಿಲ್ಲ. ಅವರ ಬದಲಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದ ರಿಂದ ಈಗ ಅವರೇ ಅಧ್ಯಕ್ಷರಾಗಿರುತ್ತಾರೆ. ನಮ್ಮ ನಿಬಂಧನೆಗಳಲ್ಲಿ ಸ್ಪಷ್ಟತೆ ಇಲ್ಲದೆ ಇರುವುದರಿಂದ ಇದೀಗ ಕೆಲವೊಂದು ಸಮಸ್ಯೆಗಳಾಗಿವೆ ಎಂದರು.







