ಧರ್ಮ ಸೌಹಾರ್ದತೆಯಿಂದ ಭಾಷಾ ಸಾಮರಸ್ಯ ಸಾಧ್ಯ: ವೀರಪ್ಪ ಮೊಯ್ಲಿ

ಉಡುಪಿ, ಎ.30: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ, ತುಳು, ಬ್ಯಾರಿ, ಉರ್ದು, ಕೊಂಕಣಿ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಇಲ್ಲಿ ಯಾವುದೇ ಭಾಷೆಗಳ ಮಧ್ಯೆ ಸಂಘರ್ಷ ನಡೆಯುವುದಿಲ್ಲ. ಆದುದರಿಂದ ಅವಿಭಜಿತ ದ.ಕ. ಜಿಲ್ಲೆಯು ಭಾಷಾ ಸಾಮರಸ್ಯದ ಮಹಾ ತೊಟ್ಟಿಲು ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಸಾಹಿತಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಉಡುಪಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸುಕೃತಿಯ ವಿಚಾರ ಗೋಷ್ಠಿಯಲ್ಲಿ ಅವರು ಭಾಷಾ ಸೌಹಾರ್ದ ಕುರಿತು ಅವರು ವಿಚಾರ ಮಂಡಿಸಿದರು.
ಧರ್ಮ ಸೌಹಾರ್ದತೆ ಇದ್ದರೆ ಭಾಷಾ ಸಾಮರಸ್ಯ ತನ್ನಷ್ಟಕ್ಕೆ ಬರುತ್ತದೆ. ಅದು ಕೃತಕ ಸೃಷ್ಠಿಯಲ್ಲ. ನಮ್ಮಲ್ಲಿ ಧರ್ಮ ಸೌಹಾರ್ದತೆ ಹಾಗೂ ಭಾಷಾ ಸೌಹರ್ದತೆ ಇದೆ. ನನಗೆ ಯಾವುದೇ ವ್ಯಾತ್ಯಾಸ ಕಾಣುವುದಿಲ್ಲ. ಮನುಷ್ಯ ಮನುಷ್ಯರಲ್ಲಿ ವ್ಯಾತ್ಯಾಸ ಕಾಣುವುದಿಲ್ಲ. ಇಂತಹ ಜಗತ್ತು ನಮಗೆ ಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ನಮ್ಮ ದೇಶ, ರಾಜ್ಯದ ಮಟ್ಟದಲ್ಲಿ ದೊಡ್ಡ ಕೊರತೆಯಾಗಿ ಕಾಣುವುದು ಭಾಷಾ ನೀತಿ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭಾಷಾ ನೀತಿಗಳಿವೆ. ಆದರೆ ನಮ್ಮಲ್ಲಿ ಇಲ್ಲ. ಆದುದರಿಂದ ನಮ್ಮ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಷಾ ನೀತಿ ಅಗತ್ಯವಾಗಿ ರಚಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಮ್ಮ ಜಿಲ್ಲೆೆಯಲ್ಲಿ ವಿವಿಧ ಪ್ರಕಾರದ ಭಾಷೆಗಳಿವೆ. ಬೈಂದೂರು, ಅಮಾಸೆಬೈಲು, ಬ್ರಹ್ಮಾವರ ಹೀಗೆ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಕುಂದಾಪುರ ಕನ್ನಡ ಮಾತನಾಡುತ್ತಾರೆ. ಹಳ್ಳಿ ಹಳ್ಳಿಗೆ ಹೋದರೆ ಹಿರಿಯರಿಂದ ಮತ್ತಷ್ಟು ಹೆಚ್ಚಿನ ಶಬ್ದಕೋಶ ಸಿಗುತ್ತದೆ. ಎಲ್ಲ ಭಾಷೆಗಳಿಗೂ ಹೊಂದಾಣಿಕೆ ಇರಬೇಕು. ಮಕ್ಕಳಿಗೆ ಸಣ್ಣಪ್ರಾಯದಲ್ಲಿ ಮಾತೃ ಭಾಷೆ ಕಲಿಸಬೇಕು. ರಾಜ್ಯದಲ್ಲಿ ಕನ್ನಡವೇ ಕೇಂದ್ರ ಭಾಷೆಯಾಗಿದ್ದುಕೊಂಡು ಸ್ಥಳೀಯ ಭಾಷೆಗಳನ್ನು ಉಳಿಸುವ ಕೆಲಸವಾದರೆ ಮಾತ್ರ ಹೊಂದಾಣಿಕೆ ಸಾಧ್ಯವಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪ್ರತಿಸ್ಪಂದನೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಹಾಗೂ ಅಧ್ಯಯನ ಕ್ಷೇತ್ರದಲ್ಲಿ ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಕೊರಗ ಅವರನ್ನು ಗೌರವಿಸಲಾಯಿತು. ನರೇಂದ್ರ ಕುಮಾರ್ ಕೋಟ ಸಮನ್ವಯಕಾರರಾಗಿದ್ದರು. ಶ್ರೀನಿವಾಸ ಭಂಡಾರಿ ಸ್ವಾಗತಿಸಿದರು. ಭಾಸ್ಕರ ಪೂಜಾರಿ ವಂದಿಸಿದರು.







