ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಲೇಖನಿ ಎತ್ತಬೇಕಾದ ಅಗತ್ಯವಿದೆ: ಉಮರ್ ಯು.ಎಚ್.

ಮಂಗಳೂರು, ಎ.30: ದ್ವೇಷದ ರಾಜಕಾರಣದಿಂದಾಗಿ ಜನರ ನಡುವೆ ಕಂದರಗಳು ಸೃಷ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ಲೇಖಕರು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಲೇಖನಿ ಎತ್ತಬೇಕಾದ ತುರ್ತು ಅಗತ್ಯ ವಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಹೇಳಿದರು.
ಬ್ಯಾರಿ ಅಕಾಡಮಿಯು ಮಾಡೂರು ಗೋಲ್ಡನ್ ಫ್ರೆಂಡ್ಸ್ ಸಹಯೋಗದಲ್ಲಿ ಬುಧವಾರ ಕೋಟೆಕಾರಿನ ಬೈತುಲ್ ಈಮಾನ್‌ನಲ್ಲಿ ಏರ್ಪಡಿಸಿದ್ದ ’ಪ್ರಥಮ ಮನೆ ಮನೆ ಬ್ಯಾರಿ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಗಳು, ಜನನಾಯಕರು ಜನರ ನಡುವೆ ಗೊಂದಲ ಮತ್ತು ಅನುಮಾನಗಳಿಗೆ ಎಡೆಮಾಡಿ ಕೊಡುವ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಉಮರ್ ಒತ್ತಾಯಿಸಿದೆ.
ಕವಿಗಳಾದ ವಿ. ಇಬ್ರಾಹಿಂ ನಡುಪದವು, ಫರ್ಹಾನ ಉಳ್ಳಾಲ, ಮನ್ಸೂರ್ ಮೂಲ್ಕಿ (ಹೃದಯ ಕವಿ), ರಮೀಝ ಯಂ.ಬಿ., ಯು.ಕೆ. ಖಾಲಿದ್, ಸಿಹಾನ ಬಿ.ಎಂ., ರಹಿಮಾನ್ ಬೋಳಿಯಾರ್, ಸಾರಾ ಮಸ್ಕುರುನ್ನೀಸ ಬ್ಯಾರಿ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದ ಸಂಚಾಲಕ, ಬ್ಯಾರಿ ಅಕಾಡಮಿಯ ಸದಸ್ಯ ಹಮೀದ್ ಹಸನ್ ಮಾಡೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಝ್ಮತುನ್ನಿಸ ಲೈಝ್ ಕಿರಾಅತ್ ಪಠಿಸಿದರು. ಬ್ಯಾರಿ ಅಕಾಡಮಿಯ ಸದಸ್ಯ ಯು.ಎಚ್.ಖಾಲಿದ್ ಉಜಿರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಡೂರು ಗೋಲ್ಡನ್ ಫ್ರೆಂಡ್ಸ್ ಅಧ್ಯಕ್ಷ ರಶೀದ್ ಹಂಝ ಮಾಡೂರು ಉಪಸ್ಥಿತರಿದ್ದರು.







