ಬದುಕಿನ ಕೊನೆಯ ಹಂತದ ರೋಗಿಗಳ, ಕುಟುಂಬದ ನೋವು ನಿವಾರಣೆ ಮಾನವೀಯ ಕೆಲಸ: ನ್ಯಾ. ಅಬ್ದುಲ್ ನಝೀರ್
ಹಾವಂಜೆಯಲ್ಲಿ ಮಣಿಪಾಲದ ಎಂಎಚ್‌ಆರ್‌ಸಿ ಉದ್ಘಾಟನೆ

ಉಡುಪಿ, ಎ.30: ಬದುಕಿನ ಕೊನೆಯ ಹಂತದಲ್ಲಿರುವ ರೋಗಿಗಳ ಹಾಗೂ ಅವರ ಕುಟುಂಬದ ನೋವು ಗಳನ್ನು ನಿವಾರಿಸುವ ಮಾನವೀಯ ಕೆಲಸವನ್ನು ಮೂಲಭೂತ ಮಾನವ ಹಕ್ಕು ಎಂಬಂತೆ ಪರಿಗಣಿಸ ಬಹುದು ಎಂದು ಆಂಧ್ರಪ್ರದೇಶದ ರಾಜ್ಯಪಾಲ ಹಾಗೂ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗಳೂ ಆದ ನ್ಯಾ.ಸೈಯದ್ ಅಬ್ದುಲ್ ನಝೀರ್ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇಲ್ಲಿಗೆ ಸಮೀಪದ ಹಾವಂಜೆಯಲ್ಲಿ ನಿರ್ಮಿಸಿರುವ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ) ಉದ್ಘಾಟಿಸಿ ಮಾತನಾಡುತಿದ್ದರು.
ವಿಶ್ವದಲ್ಲಿ ಅದರಲ್ಲೂ ವಿಶೇಷವಾಗಿ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಅಸಹಜ ರೀತಿಯಲ್ಲಿ ಹೆಚ್ಚುತ್ತಿ ರುವ ಅಂಕಿ ಅಂಶಗಳನ್ನು ಉಲ್ಲೇಖಿಸಿದ ರಾಜ್ಯಪಾಲರು, 2022ರಲ್ಲಿ 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಅದರಲ್ಲಿ ಶೇ.10ರಷ್ಟು ಜನರಿಗೆ ಮಾತ್ರ ಆರೈಕೆ ಪಡೆಯುವ ಆರ್ಥಿಕ ಶಕ್ತಿ ಇತ್ತು ಎಂಬ ಅಂಶದ ಕುರಿತು ಆತಂಕ ಹಾಗೂ ಕಳವಳವನ್ನು ವ್ಯಕ್ತಪಡಿಸಿದರು.
ಇಂಥ ಸನ್ನಿವೇಶದಲ್ಲಿ ಎಎಚ್‌ಆರ್‌ಸಿ ಯೋಜನೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಇದು ಆಸ್ಪತ್ರೆ ಕೇಂದ್ರಿತ ಮಾದರಿಗಳಿಂದ ದೂರವಾಗಿ, ಆತ್ಮೀಯತೆಯ ಆರೈಕೆಯನ್ನು ಒದಗಿಸುತ್ತದೆ. ಇದರಿಂದಾಗಿ ಕುಟುಂಬಗಳ ಮೇಲಿನ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟ ಬಹಳಷ್ಟು ಕಡಿಮೆ ಯಾಗಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ವಿವಿಧ ನೆರವುಗಳ ಮೂಲಕ ಉಚಿತವಾಗಿ, ವೈಯಕ್ತಿಕಗೊಳಿಸಿದ ಮತ್ತು ಗೌರವಾನ್ವಿತವಾಗಿ ಜೀವನದ ಕೊನೆಯ ಕ್ಷಣಗಳನ್ನು ಕಳೆಯಲು ಈ ಕೇಂದ್ರವು ಅನುವು ಮಾಡಿಕೊಡುತ್ತದೆ. ಇದು ದೇಶಕ್ಕೆ ಒಂದು ಮಾದರಿಯಾದ ಯೋಜನೆಯಾಗಿದೆ ಎಂದು ಜ.ನಝೀರ್ ತಿಳಿಸಿದರು.
ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಟ್ರಸ್ಟಿ ವಾಸಂತಿ ಆರ್. ಪೈ, ಡಾ.ಟಿಎಂಎ ಪೈ ಫೌಂಡೇಶನ್‌ನ ಅಧ್ಯಕ್ಷ ಟಿ.ಅಶೋಕ್ ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಕುಲಪತಿ ಲೆ.ಜ. (ಡಾ) ಎಂ.ಡಿ.ವೆಂಕಟೇಶ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ. ನಾರಾಯಣ ಸಭಾಹಿತ್, ಡಾ. ಶರತ್ ಕೆ ರಾವ್, ಬೆಂಗಳೂರು ಮಾಹೆಯ ಡಾ. ಮಧು ವೀರರಾಘವನ್, ಮಂಗಳೂರಿನ ಪ್ರೊ.ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ ನಾಯ್ಕ್, ಸಿಒಒ ಡಾ. ರವಿರಾಜ ಎನ್ ಎಸ್, ರಿಜಿಸ್ಟ್ರಾರ್ ಡಾ.ಪಿ. ಗಿರಿಧರ ಕಿಣಿ, ಡಾ. ಆನಂದ್ ವೇಣುಗೋಪಾಲ್, ಡಾ.ಪದ್ಮರಾಜ್ ಹೆಗ್ಡೆ, ಡಾ. ನವೀನ್ ಸಾಲಿನ್ಸ್ ಮುಂತಾದವರು ಉಪಸ್ಥಿತರಿದ್ದರು.







