ಉಡುಪಿ: ಕೊಡವೂರು ಪಳ್ಳಿಜಿಡ್ಡ ವಿವಾದಿತ ಜಾಗ ಪ್ರವೇಶಕ್ಕೆ ನಿರ್ಬಂಧ
ಉಡುಪಿ: ಜುಮಾದಿ ಕೋಲ ಆಚರಣೆಯ ಹಿನ್ನೆಲೆಯಲ್ಲಿ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಪಳ್ಳಿಜಿಡ್ಡ ಎಂಬಲ್ಲಿ ಸರ್ವೆ ನಂಬರ್ 53/6ರ 0.67 ಎಕ್ರೆ ವಿವಾದಿತ ಸರಕಾರಿ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಮೇ 2ರ ರಾತ್ರಿ 11 ಗಂಟೆಯಿಂದ ಮೇ 3ರ ಬೆಳಗ್ಗೆ 11 ಗಂಟೆಯವರೆಗೆ ನಿರ್ಬಂಧ ಸಡಿಲಿಸಿ ಕೇವಲ 8 ಜನರಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಮೇ 3ರ ಬೆಳಗ್ಗೆ 11 ಗಂಟೆಯಿಂದ ಮೇ 4ರ ಬೆಳಗ್ಗೆ 5ಗಂಟೆಯವರೆಗೆ ಯಾರು ಪ್ರವೇಶಿಸದಂತೆ ನಿರ್ಬಂಧಿಸಿ ಕಲಂ 163 ಬಿ. ಎನ್. ಎಸ್. ಎಸ್ ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಾದಿತ ಸರಕಾರಿ ಸ್ಥಳದಲ್ಲಿ ಮೇ 2ರಂದು ರಾತ್ರಿ 11 ಗಂಟೆಯಿಂದ ಮೇ 3ರ ಬೆಳಗಿನ 11 ಗಂಟೆಯ ತನಕ ನಿರ್ಬಂಧ ಸಡಿಲಿಸಿ ಕೇವಲ 8 ಜನರಿಗೆ ಮಾತ್ರ ಪ್ರವೇಶಿಸಲು ಅನುನುತಿ ನೀಡಲಾಗಿದೆ. ಮೇ 3ರಂದು ಬೆಳಗ್ಗೆ 11 ಗಂಟೆಯಿಂದ ಮೇ 4ರ ಬೆಳಗ್ಗೆ 5 ಗಂಟೆಯವರೆಗೆ ಯಾರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
ಪಟಾಕಿ ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕ, ಕಲ್ಲು ಒಯ್ಯುವುದನ್ನು ನಿಷೇಧಿಸಲಾಗಿದೆ. ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಕೂಗುವುದು, ಅವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆ ನೀಡುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿಪತ್ರಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







