ಎಸೆಸೆಲ್ಸಿ ಫಲಿತಾಂಶ: ಎರಡನೇ ಸ್ಥಾನಕ್ಕೆ ಇಳಿದ ಉಡುಪಿ ಜಿಲ್ಲೆ
51 ಶಾಲೆಗಳಿಗೆ ಶೇ.100 ಫಲಿತಾಂಶ; ಸ್ವಸ್ತಿ ಕಾಮತ್ಗೆ 625/625 ಅಂಕ

ಸ್ವಸ್ತಿ ಕಾಮತ್
ಉಡುಪಿ, ಮೇ 2: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು ಬೆಂಗಳೂರಿನಲ್ಲಿ ಪ್ರಕಟಿಸಿದ 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.89.96 ಉತ್ತೀರ್ಣತೆ ಫಲಿತಾಂಶದೊಂದಿಗೆ ರಾಜ್ಯದಲ್ಲಿ ಎರಡನೇ ಸ್ಥಾನ ಅಲಂಕರಿಸಿತು.
ಈ ಮೂಲಕ ಆರು ವರ್ಷಗಳ ಕಾಯುವಿಕೆಯ ಬಳಿಕ ಕಳೆದ ವರ್ಷ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದ ಉಡುಪಿ, ಈ ಬಾರಿ ಅದನ್ನು ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಬಿಟ್ಟು ಕೊಟ್ಟಿದೆ.
ಕಳೆದ ಬಾರಿ ಶೇ.94 ಫಲಿತಾಂಶದೊಂದಿಗೆ ಉಡುಪಿ ಅಗ್ರಸ್ಥಾನಿಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಶೇ.92.12 ಫಲಿತಾಂಶದೊಂದಿಗೆ ಎರಡನೇ ಸ್ಥಾನ ಪಡೆದಿದ್ದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 91.12ಶೇ. ಉತ್ತೀರ್ಣತೆ ಯೊಂದಿಗೆ ಅಗ್ರಸ್ಥಾನವನ್ನೂ ಉಡುಪಿ ಜಿಲ್ಲೆ 89.96 ಶೇ.ಫಲಿತಾಂಶದೊಂದಿಗೆ ಎರಡನೇ ಸ್ಥಾವನ್ನೂ ಪಡೆದಿವೆ.
ಜಿಲ್ಲೆಯಲ್ಲಿ ಗರಿಷ್ಠ 625ರಲ್ಲಿ 625 ಅಂಕ ಪಡೆದ ಕಾರ್ಕಳದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸ್ವಸ್ತಿ ಕಾಮತ್ ರಾಜ್ಯದಲ್ಲಿ 22 ಮಂದಿ ಇತರೆ ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿ ದ್ದಾರೆ. ಉಳಿದಂತೆ ಕಾರ್ಕಳ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ ಪ್ರಕೃತಿ ಪಿ. ಗುಡಿಗಾರ್ ಹಾಗೂ ಕುಂದಾಪುರ ತಾಲೂಕು ಗಂಗೊಳ್ಳಿಯ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಸುಸ್ಮಿತಾ ಎಸ್.ಗಾಣಿಗ ಅವರು ತಲಾ 624 ಅಂಕಗಳೊಂದಿಗೆ ರಾಜ್ಯದಲ್ಲಿ 65 ಮಂದಿಯೊಂದಿಗೆ ಎರಡನೇ ಸ್ಥಾನವನ್ನು ಹಂಚಿ ಕೊಂಡಿದ್ದಾರೆ. ಅಲ್ಲದೇ ಜಿಲ್ಲೆಯ ಐವರು 623 ಅಂಕಗಳನ್ನೂ ಏಳು ಮಂದಿ 622 ಅಂಕಗಳನ್ನೂ ಪಡೆದಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 14018 ವಿದ್ಯಾರ್ಥಿಗಳಲ್ಲಿ 13,246 ಮಂದಿ ತೇರ್ಗಡೆ ಗೊಳ್ಳುವುದರೊಂದಿಗೆ ಶೇ.94ರ ಸಾಧನೆಯೊಂದಿಗೆ ಜಿಲ್ಲೆ ಅಗ್ರಸ್ಥಾನಿಯಾಗಿದೆ. ಪರೀಕ್ಷೆ ಬರೆದ 7254 ಬಾಲಕರಲ್ಲಿ 6659 ಮಂದಿ ತೇರ್ಗಡೆಗೊಂಡಿದ್ದರೆ, 6764 ಬಾಲಕಿಯರ ಪೈಕಿ 6587 ಮಂದಿ ಉತ್ತೀರ್ಣ ರಾಗಿದ್ದಾರೆ ಎಂದು ಡಿಡಿಪಿಐ ಗಣಪತಿ ಅವರು ಮಾಹಿತಿ ನೀಡಿದ್ದಾರೆ.
ರೆಗ್ಯುಲರ್ ವಿದ್ಯಾರ್ಥಿಗಳು ಶೇ.89.96: ಪ್ರಥಮ ಬಾರಿ ಪರೀಕ್ಷೆ ಬರೆದ ರೆಗ್ಯೂಲರ್ ವಿದ್ಯಾರ್ಥಿಗಳ ಉತ್ತೀರ್ಣತೆಯ ಫಲಿತಾಂಶವನ್ನು ಪರಿಗಣಿಸಿದರೆ ಉಡುಪಿ ಜಿಲ್ಲೆಯ ಸಾಧನೆ ಶೇ.89.96 ಆಗಿದೆ. ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳು ಹಾಗೂ ಖಾಸಗಿ ಪುನರಾವರ್ತಿತ ವಿದ್ಯಾರ್ಥಿ ಗಳ ತೇರ್ಗಡೆಯನ್ನು ಪರಿಗಣನೆಗೆ ತೆಗೆದುಕೊಂಡಾಗ ಜಿಲ್ಲೆಯ ಫಲಿತಾಂಶ ಶೇ.88.21ಕ್ಕೆ ಇಳಿಯುತ್ತದೆ.
ಒಟ್ಟು 13,579 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 12,215 ಮಂದಿ ತೇರ್ಗಡೆಗೊಂಡು ಶೇ.89.96 ಫಲಿತಾಂಶ ಬಂದಿದೆ. ಆದರೆ ಪುನರಾವರ್ತಿತ ವಿದ್ಯಾರ್ಥಿಗಳು ಶೇ.9.76, ಖಾಸಗಿ ವಿದ್ಯಾರ್ಥಿಗಳು ಶೇ.12.04 ಹಾಗೂ ಖಾಸಗಿ ಪುನರಾವರ್ತಿತ ವಿದ್ಯಾರ್ಥಿ ಗಳು ಶೇ.13.51 ತೇರ್ಗಡೆಗೊಂಡಿದ್ದರಿಂದ ಅಂತಿಮವಾಗಿ ಜಿಲ್ಲೆಯ ಫಲಿತಾಂಶ ಶೇ.88.21 ಆಗಿದೆ. ಸಮಗ್ರವಾಗಿ ಜಿಲ್ಲೆಯಲ್ಲಿ 7248 ಬಾಲಕರು, 6641 ಬಾಲಕಿಯರು ಸೇರಿದಂತೆ 13,889 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 6009 ಬಾಲಕರು, 6242 ಬಾಲಕಿಯರು ಸೇರಿದಂತೆ 12,251 ಮಂದಿ ತೇರ್ಗಡೆಗೊಂಡಿದ್ದಾರೆ.
ಕಾರ್ಕಳ ವಲಯ ಮೇಲುಗೈ: ವಲಯವಾರು ಫಲಿತಾಂಶ ನೋಡಿದಾಗ ಜಿಲ್ಲೆಯಲ್ಲಿ ಈ ಬಾರಿಯೂ ಕಾರ್ಕಳ ವಲಯ ಶೇ.92.40 ಫಲಿತಾಂಶ ದೊಂದಿಗೆ ಮೊದಲ ಸ್ಥಾನಿಯಾಗಿದೆ.ಕುಂದಾಪುರ ವಲಯ ಶೇ.92.07 ಫಲಿತಾಂಶದೊಂದಿಗೆ ಎರಡನೇ ಬ್ರಹ್ಮಾವರ ವಲಯ 89.45 ತೇರ್ಗಡೆ ಯೊಂಜಿಗೆ ಮೂರನೇ, ಉಡುಪಿ ವಲಯ ಶೇ.88.44 ಫಲಿತಾಂಶದೊಂದಿಗೆ ನಾಲ್ಕನೇ ಹಾಗೂ ಬೈಂದೂರು ವಲಯ ಶೇ.87.23 ಫಲಿತಾಂಶದೊಂದಿಗೆ ಐದನೇ ಸ್ಥಾನ ಪಡೆದಿದೆ.
ಗ್ರಾಮೀಣ ಮಕ್ಕಳೇ ಬುದ್ಧಿವಂತರು: ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೇ ಕಲಿಕೆಯಲ್ಲಿ ಬುದ್ಧಿವಂತರು ಎಂಬುದನ್ನು ಇಂದಿನ ಫಲಿತಾಂಶ ಮತ್ತೆ ತೋರಿಸಿಕೊಟ್ಟಿದೆ. ಜಿಲ್ಲೆಯಲ್ಲಿ ಶೇ.90.29ರಷ್ಟು ಗ್ರಾಮೀಣ ಭಾಗದ ಮಕ್ಕಳು ಉತ್ತೀರ್ಣರಾದರೆ, ನಗರ ಪ್ರದೇಶದ ಮಕ್ಕಳ ಉತ್ತೀರ್ಣತೆ ಪ್ರಮಾಣ ಶೇ.88.70 ಆಗಿದೆ.
ಗ್ರಾಮೀಣ ಭಾಗದ 10,721 ಮಂದಿ ವಿದ್ಯಾರ್ಥಿಗಳಲ್ಲಿ 9,680 ಮಂದಿ ಉತ್ತೀರ್ಣರಾಗಿದ್ದಾರೆ. 5546 ಬಾಲಕರಲ್ಲಿ 4758 ಮಂದಿ ಹಾಗೂ 5175 ಬಾಲಕಿಯರಲ್ಲಿ 4922 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 2858 ಮಂದಿಯಲ್ಲಿ 2535 ಮಂದಿ ಉತ್ತೀರ್ಣ ರಾಗಿದ್ದಾರೆ. 1473 ಬಾಲಕರಲ್ಲಿ 1231 ಮಂದಿ ಹಾಗೂ 1385 ಬಾಲಕಿಯರಲ್ಲಿ 1304 ಮಂದಿ ತೇರ್ಗಡೆಗೊಂಡಿದ್ದಾರೆ.
ಆಂಗ್ಲ ಮಾಧ್ಯಮ ಮೇಲುಗೈ: ಮಾಧ್ಯಮದ ವಿಷಯಕ್ಕೆ ಬಂದಾಗ ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೇ ಮೇಲುಗೈ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.95.10 ಮಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಬರೆದ ಶೇ.82.78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ 7906 ಮಂದಿ ಪರೀಕ್ಷೆ ಬರೆದಿದ್ದು 7519 ಮಂದಿ ಪಾಸಾಗಿದ್ದರೆ, ಕನ್ನಡ ಮಾಧ್ಯಮ ದಲ್ಲಿ ಉತ್ತರ ಬರೆದ 5673 ಮಂದಿಯಲ್ಲಿ 4696 ಮಂದಿ ತೇರ್ಗಡೆಗೊಂಡಿದ್ದಾರೆ.
ಜಾತಿವಾರು ಫಲಿತಾಂಶ: ಜಿಲ್ಲೆಯಲ್ಲಿ ಜಾತಿವಾರು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.83.84ರಷ್ಟು, ಪರಿಶಿಷ್ಟ ಪಂಗಡದ ಶೇ.85.42, ಪ್ರವರ್ಗ-1ರ ಶೇ.90.36, 2ಎ ವರ್ಗದ ಶೇ.91.43, 2ಬಿ-ಶೇ.85.22, 3ಎ-ಶೇ.95.68, 3ಬಿ-ಶೇ.92.82 ಹಾಗೂ ಇತರೆ-ಶೇ.95.99ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಎಸೆಸೆಲ್ಸಿಯಲ್ಲಿ ಉಡುಪಿ ಜಿಲ್ಲೆಯ ಸಾಧನೆ
ವರ್ಷ ಫಲಿತಾಂಶ ಶೇ. ರಾಜ್ಯದಲ್ಲಿ ಸ್ಥಾನ
2015 - 93.37 - 1
2016 - 89.64 - 2
2017 - 84.23 - 1
2018 - 88.30 - 1
2019 - 89.49 - 5
2020 - 86.48 - 9
2021 - 100 -
2022 - 89.46 - 13
2023 - 91 - 17
2024 - 94 - 1
2025 - 89.96 - 2
ಫಲಿತಾಂಶದಲ್ಲಿ ಅನುದಾನರಹಿತ ಶಾಲೆಗಳ ಮೇಲುಗೈ
ಉಡುಪಿ, ಮೇ 2: ಇಂದು ಪ್ರಕಟಗೊಂಡ ಎಸೆಸೆಲ್ಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಅನುದಾನ ರಹಿತ ಶಾಲೆಗಳು ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಹೋಲಿಸಿದರೆ ಉತ್ತಮ ಫಲಿತಾಂಶ ದಾಖಲಿ ಸಿವೆ. ಅನುದಾನರಹಿತ ಶಾಲೆಗಳ ಶೇ.95.82ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಸರಕಾರಿ ಶಾಲೆಗಳ ಶೇ.87.20 ಹಾಗೂ ಅನುದಾನಿತ ಶಾಲೆಗಳ ಶೇ.86.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ.
ಅನುದಾನ ರಹಿತ ಶಾಲೆಗಳ ಒಟ್ಟು 4450 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 4264 ವಿದ್ಯಾರ್ಥಿ ಗಳು ತೇರ್ಗಡೆಗೊಂಡಿದ್ದಾರೆ. ಅದೇ ರೀತಿ ಸರಕಾರಿ ಶಾಲೆಗಳ 6390 ವಿದ್ಯಾರ್ಥಿಗಳ ಪೈಕಿ 5572 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಅನುದಾನಿತ ಶಾಲೆಗಳ 2739 ವಿದ್ಯಾರ್ಥಿ ಗಳು ಪರೀಕ್ಷೆ ಬರೆದು ಇವರಲ್ಲಿ 2379 ಮಂದಿ ಈ ಬಾರಿ ಪಾಸಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 51 ಶಾಲೆಗಳಿಗೆ ಶೇ.100 ಫಲಿತಾಂಶ
ಇಂದು ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಒಟ್ಟು 51 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ. ಇವುಗಳಲ್ಲಿ 15 ಸರಕಾರಿ ಶಾಲೆಗಳಾದರೆ, 4 ಅನುದಾನಿತ ಹಾಗೂ 32 ಅನುದಾನರಹಿತ ಶಾಲೆಗಳಿವೆ. ಇವುಗಳಲ್ಲಿ 32 ಗ್ರಾಮೀಣ ಭಾಗದ ಶಾಲೆಗಳಾದರೆ ಉಳಿದ 9 ನಗರ ಪ್ರದೇಶದ ಶಾಲೆಗಳು. ಕಳೆದ ಬಾರಿ 98 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದವು.
100 ಫಲಿತಾಂಶ ಪಡೆದ ಸರಕಾರಿ ಶಾಲೆಗಳು: ಸರಕಾರಿ ಪ್ರೌಢ ಶಾಲೆ ಮೂಡುಗಿಳಿಯಾರು ಕುಂದಾ ಪುರ, ಕೋಡಿ ಕನ್ಯಾಣ ಉಡುಪಿ, ಕಾವಡಿ ಉಡುಪಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರ, ಹಾಲಾಡಿ ಶ್ರೀರಘುವೀರ ಎ.ಶೆಟ್ಟಿ ಸರಕಾರಿ ಪ್ರೌಢ ಶಾಲೆ ನಲ್ಲೂರು ಕಾರ್ಕಳ, ಕೆ.ಜಿ.ಜಗನ್ನಾಥ ರಾವ್ ಸರಕಾರಿ ಸಂಯುಕ್ತ ಶಾಲೆ ಕೋಣಿ ಕುಂದಾಪುರ.
ಸರಕಾರಿ ಪ್ರೌಢ ಶಾಲೆ ಗುಂಡ್ಮಿ, ಸರಕಾರಿ ಸಂಯುಕ್ತ ಪ್ರೌಢ ಶಾಲೆ ಕಲ್ಯಾ ಕಾರ್ಕಳ, ಸರಕಾರಿ ಪ್ರೌಢ ಶಾಲೆ ಜಾನುವಾರುಕಟ್ಟೆ ಬ್ರಹ್ಮಾವರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೈಂದೂರು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೋಟೇಶ್ವರ, ಸರಕಾರಿ ಪ್ರೌಢ ಶಾಲೆ ಹೈಕಾಡಿ ಹಿಲಿಯಾಣ ಉಡುಪಿ, ಡಾ.ಬಿ.ಆರ್. ಅಂಬೇಡ್ಕರ್ವಸತಿ ಶಾಲೆ ಶಂಕರನಾರಾಯಣ, ಎಸ್ಎಂಟಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ಧಾಪುರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಳ್ತೂರು ಉಡುಪಿ.







