ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು
► ಸುಶ್ಮಿತಾ ಗಾಣಿಗಗೆ ಯುಪಿಎಸ್ಸಿಯ ಕನಸು ► ಸಾಯಿಸ್ಪರ್ಶಗೆ ಇಂಜಿನಿಯರ್ ಆಗುವ ಬಯಕೆ ► ಪ್ರಾವ್ಯಗೆ ವೈದ್ಯೆಯಾಗುವ ಬಯಕೆ

ಸುಶ್ಮಿತಾ ಗಾಣಿಗ, ಸಾಯಿಸ್ಪರ್ಶ, ಪ್ರಾವ್ಯ
ಉಡುಪಿ, ಮೇ 2: ಕಾರ್ಕಳ ತಾಲೂಕು ಕುಕ್ಕಂದೂರು ಗಣಿತ ನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸ್ವಸ್ತಿ ಕಾಮತ್ ಅವರು ಇಂದು ಪ್ರಕರಣಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯದ 22 ಮಂದಿಯೊಂದಿಗೆ ಅಗ್ರಸ್ಥಾನವನ್ನು ಹಂಚಿ ಕೊಂಡಿದ್ದಾರೆ.
ಸ್ವಸ್ತಿ ಕಾಮತ್ ಅವರು ಎಲ್ಲಾ ಆರು ವಿಷಯಗಳಲ್ಲೂ ಗರಿಷ್ಠ ಅಂಕ ಗಳಿಸಿದರು. ಉಳಿದಂತೆ ಜಿಲ್ಲೆಯ ಇಬ್ಬರು 624, ಐವರು 623 ಹಾಗೂ ಏಳು ಮಂದಿ 622 ಅಂಕಗಳನ್ನು ಗಳಿಸಿದ್ದಾರೆ. ಜಿಲ್ಲೆಯಲ್ಲಿ ಗರಿಷ್ಠ 15 ಸ್ಥಾನ ಪಡೆದವರ ವಿವರ ಹೀಗಿದೆ.
1.ಸ್ವಸ್ತಿ ಕಾಮತ್, ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಕುಕ್ಕಂದೂರು ಕಾರ್ಕಳ (625ಅಂಕ), 2.ಪ್ರಕೃತಿ ಪಿ.ಗುಡಿಯಾರ್, ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪಿಯು ಶಾಲೆ ಕಾರ್ಕಳ (624), 3.ಸುಶ್ಮಿತಾ ಎಸ್.ಗಾಣಿಗ, ಎಸ್ವಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗಂಗೊಳ್ಳಿ ಕುಂದಾಪುರ (624).
4.ಸಾಯಿಸ್ಪರ್ಶ ಕೆ., ವಿಕೆಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಕುಂದಾಪುರ (623), 5.ವರ್ಷಿಣಿ ಎಸ್.ರೈ, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ (623), 6.ನಿಧಿ ಪೈ ಎಂ., ವಿವೇಕ ಆಂಗ್ಲ ಮಾಧ್ಯಮ ಶಾಲೆ ಕೋಟ (623), 7.ಕೆ.ಶ್ರೀನಿತ್ ಎಸ್.ಶೇರಿಗಾರ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಡುಪಿ (623), 8.ಪ್ರಾವ್ಯ ಪಿ.ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿ ಕುಂದಾಪುರ (623).
9.ಸೃಷ್ಟಿ ಆಚಾರ್, ಸರಕಾರಿ ಬಾಲಕಿಯರ ಜೂನಿಯರ್ ಕಾಲೇಜು ಉಡುಪಿ (622), 10.ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 11.ಪ್ರಿಯಾ, ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 12.ಹರಿಪ್ರಸಾದ್ ಎಂ.ಎಸ್., ಶ್ರೀವೆಂಕಟರ ಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 13.ಸಾಯಿ ಕೀರ್ತನ, ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 14.ಮಾನಸಿ ನಾಯಕ್, ಶ್ರೀಮದ್ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ (622), 15. ಆಯುಷ್ ಯು.ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿ ಕುಂದಾಪುರ (622).
ಸುಶ್ಮಿತಾ ಗಾಣಿಗಗೆ ಯುಪಿಎಸ್ಸಿಯ ಕನಸು
ಗರಿಷ್ಠ 625ರಲ್ಲಿ 624 ಅಂಕ ಪಡೆದಿರುವ ಗಂಗೊಳ್ಳಿಯಂಥ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಸುಶ್ಮಿತಾ ಎಸ್.ಗಾಣಿಗ ಅವರಿಗೆ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಖುಷಿ ಇನ್ನೂ ಕಡಿಮೆಯಾಗಿಲ್ಲ.
ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್.ಗಾಣಿಗ ಸಂಸ್ಕೃತ-125, ಇಂಗ್ಲೀಷ್-99, ಕನ್ನಡ-100, ಗಣಿತ-100, ವಿಜ್ಞಾನ-100 ಮತ್ತು ಸಮಾಜ ವಿಜ್ಞಾನ ದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಈಕೆ ಗಂಗೊಳ್ಳಿ ಗುಡ್ಡೆಕೇರಿ ನಿವಾಸಿಗಳಾದ ಉದ್ಯಮಿ ಶಿವಾನಂದ ಗಾಣಿಗ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಎಸ್.ಗಾಣಿಗ ದಂಪತಿ ಪುತ್ರಿ.
ಎಸೆಸೆಲ್ಸಿ ಫಲಿತಾಂಶದಿಂದ ಬಹಳ ಸಂತೋಷವಾಗಿದೆ. ಪರೀಕ್ಷೆಯಲ್ಲಿ 625 ಅಂಕವನ್ನು ನಿರೀಕ್ಷೆ ಮಾಡಿದ್ದೆ. 624 ಅಂಕ ಲಭಿಸಿದೆ. ಇಂಗ್ಲೀಪ್ನಲ್ಲಿ ಒಂದು ಅಂಕ ಕಡಿಮೆ ಬಂದಿದ್ದು, ಉತ್ತರ ಪತ್ರಿಕೆಯ ಜೆರಾಕ್ಸ್ ತರಿಸಿಕೊಂಡು ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತೇನೆ. ಪಿಯುಸಿಯಲ್ಲಿ ಪಿಸಿಎಂಸಿ ತೆಗೆದುಕೊಂಡು ಜೆಇಇ ಪರೀಕ್ಷೆ ಬರೆದು, ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇನೆ ಎಂದು ಸುಶ್ಮಿತಾ ಗಾಣಿಗ ತನ್ನ ಸಂತಸವನ್ನು ಹಂಚಿಕೊಂಡರು.
ಸಾಯಿಸ್ಪರ್ಶಗೆ ಇಂಜಿನಿಯರ್ ಆಗುವ ಬಯಕೆ
ಇಲ್ಲಿನ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಯಿಸ್ಪರ್ಶ ಕೆ. ಅವರು 623 ಅಂಕ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಯಲ್ಲಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಕುಂದಾಪುರದ ಈಸ್ಟ್ ಬ್ಲಾಕ್ ರಸ್ತೆಯ ರಾಮಮಂದಿರ ಬಳಿಯ ನಿವಾಸಿ, ಮೂಲ್ಕಿ ವಿಜಯಾ ಕಾಲೇಜಿನ ಪ್ರಾಧ್ಯಾಪಕ ದೇವದಾಸ್ ಹಾಗೂ ತಲ್ಲೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶಶಿಕಲಾ ದಂಪತಿಯ ಪುತ್ರಿ. ಸಾಯಿಸ್ಪರ್ಶಗೂ ಗರಿಷ್ಠ 625 ಅಂಕ ಬರುವ ನಿರೀಕ್ಷೆಯಿತ್ತು. ಆದರೆ 2 ಅಂಕ ಕಡಿಮೆ ಯಾಯಿತು ಎಂದು ಬೇಸರದ ಧ್ವನಿಯಲ್ಲಿ ನುಡಿದರು. ಮರು ಮೌಲ್ಯ ಮಾಪನಕ್ಕೆ ಹಾಕಲಾಗುವುದು ಎಂದೂ ಅವರು ಹೇಳಿದರು.
ಪ್ರತಿನಿತ್ಯ ಬೆಳಗ್ಗೆ ಹೊತ್ತು 2 ಗಂಟೆ ಹಾಗೂ ಸಂಜೆ 3-4 ಗಂಟೆ ಓದುತ್ತಿದ್ದೆ. ಟ್ಯೂಷನ್ಗೇನೂ ಹೋಗಿಲ್ಲ. ನನ್ನ ಸಾಧನೆಯಲ್ಲಿ ಹೆತ್ತವರು, ಶಿಕ್ಷಕರದ್ದು ಅಪಾರವಾದ ಸಹಕಾರವಿದೆ. ಮುಂದೆ ವಿಜ್ಞಾನ ವಿಭಾಗ ತೆಗೆದುಕೊಂಡು ಜೆಇಇ ಮೂಲಕ ಇಂಜಿನಿಯರಿಂಗ್ ಓದುವಾಸೆಯಿದೆ ಎಂದು ಸಾಯಿ ಸ್ಪರ್ಶ ಕೆ. ಹೇಳಿದರು.
ಪ್ರಾವ್ಯಗೆ ವೈದ್ಯೆಯಾಗುವ ಬಯಕೆ
ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿರುವ ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾವ್ಯ ಪಿ. ಶೆಟ್ಟಿಗೆ ವೈದ್ಯೆಯಾಗುವ ಕನಸಿದೆ. ಪ್ರಾವ್ಯ ಪಿ.ಶೆಟ್ಟಿ ಒಟ್ಟು 623 ಅಂಕಗಳಿಸಿದ್ದಾರೆ.
ತನ್ನ ಸಾಧನೆಯ ಕುರಿತು ಮಾತನಾಡಿ ಪ್ರಾವ್ಯ ಪಿ. ಶೆಟ್ಟಿ, ಈ ಫಲಿತಾಂಶ ವನ್ನು ಮೊದಲೇ ನಿರೀಕ್ಷಿಸಿದ್ದೆ. ಈ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರ ಕಾರಣ. ಶಾಲೆಯಲ್ಲಿನ ಅತ್ಯುತ್ತಮವಾದ ಬೋಧನೆ, ನಿರಂತರವಾಗಿ ನಡೆಸುತ್ತಿದ್ದ ಪೂರ್ವ ತಯಾರಿ ಪರೀಕ್ಷೆಗಳು, ಪರೀಕ್ಷಾ ಸಮಯದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಗಾರಗಳು, ಸಹಪಠ್ಯ ಚಟುವಟಿಕೆ ಗಳು ಉತ್ತಮ ಸಾಧನೆಗೆ ಸಹಾಯವಾಯಿತು ಎಂದರು.
ನಾನು ಹಾಸ್ಟೆಲ್ ವಿದ್ಯಾರ್ಥಿನಿಯಾಗಿದ್ದು, ಹಾಸ್ಟೆಲ್ ಸ್ಟಡಿ ಅವಧಿ, ಹಾಸ್ಟೆಲ್ ಶಿಕ್ಷಕರು, ಹಾಸ್ಟೆಲ್ ವಾರ್ಡನ್ ಎಲ್ಲರ ಸಹಕಾರದಿಂದ ಈ ಸಾಧನೆ ಮಾಡಿದ್ದೇನೆ. ವಿಶೇಷವಾಗಿ ನಮ್ಮ ಶಾಲೆಯಲ್ಲಿ ಆರನೇ ತರಗತಿಯಿಂದಲೇ ಬೋಧಿಸುತ್ತಿರುವ ಐಐಟಿ/ನೀಟ್ ಫೌಂಡೇಶನ್ ಕೋರ್ಸ್ನ ಮಾಸಿಕ ಪರೀಕ್ಷೆಗಳು ಜಟಿಲವಾದ ಪ್ರಶ್ನೆಗಳನ್ನು ಸರಳವಾಗಿ ಉತ್ತರಿಸಲು ನೆರವಾಯಿತು.
ಮುಂದೆ ವೈದ್ಯೆಯಾಗಿ ಜನರ ಸೇವೆ ಮಾಡುವ ಆಸೆ ಇದೆ. ಪಿಯುಸಿ ಶಿಕ್ಷಣವನ್ನು ನಮ್ಮದೇ ಸುಜ್ಞಾನ ಪಿಯು ಕಾಲೇಜಿನಲ್ಲಿ ಮುಂದುವರಿಸುತ್ತೇನೆ ಎಂದರು.







