ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಡಿಎನ್ಬಿ ಪದವಿ ತರಬೇತಿಗೆ ಮಾನ್ಯತೆ

ಉಡುಪಿ, ಮೇ 3: ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿನ ಮಾನಸಿಕ ಆರೋಗ್ಯ ವಿಭಾಗದಲ್ಲಿ ಸ್ನಾತಕೋತ್ತರ ಡಿಎನ್ಬಿ ಪದವಿ ತರಬೇತಿಗೆ ಮಾನ್ಯತೆ ದೊರಕಿದ್ದು, ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಮಹತ್ವದ ಸಾಧನೆಯಾಗಿದೆ.
ಉಡುಪಿಯ ಸರಕಾರಿ ಜಿಲ್ಲಾ ಆಸ್ಪತ್ರೆಯನ್ನು ಹೊಸದಿಲ್ಲಿಯ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಅಧಿಕೃತವಾಗಿ ಮನೋವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ನೀಡಲು ಜಿಲ್ಲೆಯಲ್ಲಿ ಎರಡು ಸೀಟುಗಳಿಗೆ ಮಾನ್ಯತೆ ನೀಡಿದೆ.
ಅರ್ಹ ಎಂಬಿಬಿಎಸ್ ಪದವೀಧರರು ಹಾಗೂ ಅರ್ಹ ಡಿಪ್ಲೋಮ ಇನ್ ಸೈಕಾಲಾಜಿಕಲ್ ಮೆಡಿಸಿನ್ ಪದವೀಧರರಿಗೆ (ಡಿಪಿಎಂ) ಈ ಸೀಟುಗಳು ಲಭ್ಯವಿದೆ. ಈ ಮೂಲಕ ಜಿಲ್ಲಾ ಆಸ್ಪತ್ರೆಯಲ್ಲಿ ಮನೋ ವೈದ್ಯಕೀಯ ಸ್ನಾತಕೋತ್ತರ ಪದವಿ (ಡಿಎನ್ಬಿ) ಕೋರ್ಸ್ ವಿಭಾಗ ಹೊಂದಿದ ರಾಜ್ಯದ ಮೊದಲ ಜಿಲ್ಲಾಸ್ಪತ್ರೆಯಾಗಿ ಉಡುಪಿ ಮೂಡಿಬಂದಿದೆ.
ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞ ಡಾ. ವಾಸುದೇವ ಎಸ್. ಅವರನ್ನು ಡಿಎನ್ಬಿ ಮನೋವೈದ್ಯಶಾಸ್ತ್ರದ ನೋಡೆಲ್ ಕಾರ್ಯಕ್ರಮ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಉಡುಪಿ ಮತ್ತು ಅಕ್ಕಪಕ್ಕದ ಪ್ರದೇಶ ಗಳಲ್ಲಿರುವ ವೈದ್ಯಕೀಯ ಪದವೀಧರರಿಗೆ ಮನೋವೈದ್ಯಶಾಸ್ತ್ರದಲ್ಲಿ ಪರಿಣತಿ ಪಡೆಯಲು ಇದು ಅವಕಾಶವನ್ನು ಕಲ್ಪಿಸುತ್ತದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಸ್ಪತ್ರೆ ನೋಡಲ್ ಕಾರ್ಯಕ್ರಮ ಸಂಯೋಜಕ ಮತ್ತು ಆರ್‌ಎಂಒ ಡಾ.ವಾಸುದೇವ್ ಎಸ್ ಅವರನ್ನು ಸಂಪರ್ಕಿಸಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.







