ವಂಡ್ಸೆ: ನೆಂಪು ಸರಕಾರಿ ಪದವಿ ಪೂರ್ವ ಕಾಲೇಜಿನ ಬಹುಪಯೋಗಿ ಸಾಂಸ್ಕೃತಿಕ ಸಭಾಭವನ ಲೋಕಾರ್ಪಣೆಗೆ ಸಿದ್ಧ

ಕುಂದಾಪುರ, ಮೇ 3: ಸುಮಾರು 63 ವರ್ಷಗಳ ಕಾಲ ಮಲೆನಾಡು ಭಾಗದ ಶಿಕ್ಷಣಾಸಕ್ತ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಸಾವಿರಾರು ಮಕ್ಕಳ ಜೀವನಕ್ಕೆ ಶಿಕ್ಷಣದ ಭದ್ರ ಬುನಾದಿಯನ್ನು ಒದಗಿಸಿದ ಶಿಕ್ಷಣ ದೇಗುಲ ವೊಂದರ ಅವಶ್ಯಕತೆಯನ್ನು ಮನಗಂಡು, ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿ ಗಳು ಅಂದಾಜು 1.25 ಕೋಟಿಗೂ ಅಧಿಕ ಮೊತ್ತದ ಸುಸಜ್ಜಿತ ಬಹುಪಯೋಗಿ ಸಾಂಸ್ಕೃತಿಕ ಸಭಾ ಭವನದ ನಿರ್ಮಾಣ ಕಾರ್ಯ ತಾಲೂಕಿನ ವಂಡ್ಸೆ ನೆಂಪುವಿನ ಸರಕಾರಿ ಪದವಿ ಪೂರ್ವ ಕಾಲೇಜಿನ (ಕೆಪಿಎಸ್) ಆವರಣ ದಲ್ಲಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಜ್ಜಾಗಿದೆ.
ಸಹ್ಯಾದ್ರಿಯ ತಪ್ಪಲು ಪ್ರದೇಶದ, ಮಲೆನಾಡಿನ ಪ್ರಕೃತಿ ರಮಣೀಯ ಪರಿಸರದ ವಂಡ್ಸೆ ಭಾಗದ ಸುತ್ತ-ಮುತ್ತಲಿನ 25ಕ್ಕೂ ಅಧಿಕ ಹಳ್ಳಿಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಾಥಮಿಕ ನಂತರದ ಶಿಕ್ಷಣಕ್ಕಾಗಿ ದೂರದ ಕುಂದಾಪುರಕ್ಕೆ ಬರಬೇಕಾದ ಅನಿವಾರ್ಯತೆ ಇದ್ದ ಕಾಲಘಟ್ಟದಲ್ಲಿ ಅಂದಿನ ಶಾಸಕರಾಗಿದ್ದ ಯಡ್ತರೆ ಮಂಜಯ್ಯ ಶೆಟ್ಟಿ ಅವರ ಪ್ರಯತ್ನದಿಂದಾಗಿ 1962ರಲ್ಲಿ ವಂಡ್ಸೆ-ನೆಂಪುವಿನ ಸುಮಾರು 10 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ ಮಲ್ನಾಡ್ ಹೈಸ್ಕೂಲ್ ಪ್ರಾರಂಭಗೊಂಡಿತ್ತು.
ಅಂದಿನಿಂದ ಇಂದಿನವರೆಗೂ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಾಭ್ಯಾಸವನ್ನು ಪಡೆದು, ಉನ್ನತ ಶಿಕ್ಷಣವನ್ನು ಪಡೆದುಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬದುಕಿನ ನೆಲೆಯನ್ನು ಕಟ್ಟಿಕೊಂಡಿದ್ದಾರೆ. ಈ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಸಕ ರಾಗಿ, ರಾಜ್ಯ ಹಾಗೂ ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳಾಗಿ, ನಾಡಿನ ಪ್ರಸಿದ್ಧ ಉದ್ಯಮಿಗಳಾಗಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಮುಂದಾಳುಗಳಾಗಿ ಸೇವೆ ಸಲ್ಲಿಸುತಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ 1984-85ನೇ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ವಿಭಾಗ ಪ್ರಾರಂಭಗೊಂಡಿತ್ತು. ಪ್ರಸ್ತುತ ಈ ಜ್ಞಾನ ದೇಗುಲದಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ 800 ವಿದ್ಯಾರ್ಥಿಗಳು ಕಲಿಯುತಿದ್ದಾರೆ.
ಸಾಂಸ್ಕೃತಿಕ ಸಭಾ ಭವನ ನಿರ್ಮಾಣ: ಶಾಲೆಯ ಅಭಿವೃದ್ಧಿಯ ಕನಸು ಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, 6 ದಶಕಗಳ ಹಿರಿತನ ಇರುವ ಶಿಕ್ಷಣ ದೇಗುಲಕ್ಕೆ ಅವಶ್ಯಕ ವಾಗಿರುವ ಹಾಗೂ ಪರಿಸರದ ಸಾಂಸ್ಕೃತಿಕ ಆಸಕ್ತರಿಗೆ ಅನುಕೂಲಕರವಾಗುವ ಸಾಂಸ್ಕೃತಿಕ ಸಭಾ ಭವನದ ನಿರ್ಮಾಣದ ಕನಸನ್ನು ಕಂಡಿದ್ದರು.
ಈ ಕನಸನ್ನು ನನಸಾಗಿಸುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು ಪ್ರಸ್ತುತ ಹಳೆ ವಿದ್ಯಾರ್ಥಿ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ಬಿ.ಎನ್.ಶೆಟ್ಟಿ ಅವರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾದ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಮಾರ್ಗದರ್ಶ ನದಲ್ಲಿ, ಶಾಲೆಯ ಹಳೆ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡು ಸುಸಜ್ಜಿತವಾದ ಸಾಂಸ್ಕೃತಿಕ ಭವನದ ನಿರ್ಮಾಣದ ಗುರಿಯನ್ನು ಇರಿಸಿಕೊಂಡು ಮುಂದಡಿ ಇಟ್ಟರು.
ಪ್ರಾರಂಭದಲ್ಲಿ ಶಾಲೆಯ ಸಾಂಸ್ಕೃತಿಕ ಚಟುವಟಿಕೆಯ ಉದ್ದೇಶಗಳಿಗೆ ಸೀಮಿತವಾದ ಭವನ ನಿರ್ಮಾಣಕ್ಕೆ ಮುಂದಾಗಿದ್ದ ಸಮಿತಿ, ಶಾಲೆಯ ಹಳೆವಿದ್ಯಾರ್ಥಿಗಳು ಹಾಗೂ ದಾನಿಗಳ ಪ್ರೋತ್ಸಾಹದಿಂದ ಉದ್ದೇಶಿತ ಯೋಜನೆಯನ್ನು ಇನ್ನಷ್ಟು ವಿಸ್ತಾರಗೊಳಿಸಿ 1.25 ಕೋಟಿ ರೂ. ವೆಚ್ಚದ 4,600 ಚ.ಅಡಿ ವಿಸ್ತೀರ್ಣದ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು.
ಈ ಭವನದಲ್ಲಿ ವಾಚನಾಲಯ, ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಇ-ಕಲಿಕೆ, ಯೋಗ, ಕಂಪ್ಯೂಟರ್, ಕೌಶಲಾಭಿವೃಧ್ಧಿ ತರಬೇತಿಗೆ ಅಗತ್ಯ ಸ್ಥಳವಕಾಶ ಒದಗಿಸಲಾಗಿದೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಒಳಾಂಗಣ ಚಟುವಟಿಕೆಗೂ ಅವಕಾಶ ನೀಡುವ ಉದ್ದೇಶವಿದೆ. ನೆಲ ಹಾಸುಗಳಿಗೆ ಇಂಟರ್ಲಾಕ್ ಅಳವಡಿಸುವುದರೊಂದಿಗೆ ಕಟ್ಟಡವನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯತೆಗಳಿಗಾಗಿ ತಜ್ಞರ ಸಲಹೆಯಂತೆ ಧ್ವನಿ-ಬೆಳಕು ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜು ಗೊಳಿಸಲಾಗಿದೆ.
ಮೇ 10ಕ್ಕೆ ಲೋಕಾರ್ಪಣೆ: ನೂತನವಾಗಿ ನಿರ್ಮಾಣಗೊಂಡಿರುವ ಸಾಂಸ್ಕೃತಿಕ ಸಭಾ ಭವನಕ್ಕೆ ದಾನಿ ಹೊಳ್ಮಗೆ ವಿನೋದ ರವಿ ಶೆಟ್ಟಿ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಮೇ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕಟ್ಟಡದ ಲೋಕಾರ್ಪಣೆಗೆ ಸಿದ್ದತೆಗಳು ನಡೆಯು ತ್ತಿವೆ. ಇದೇ ಸಂದರ್ಭದಲ್ಲಿ ಶಾಲೆಯ ಸ್ಥಾಪನೆಗೆ ಕಾರಣರಾಗಿದ್ದ ಅಂದಿನ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿ ಅವರ ಪುತ್ಥಳಿ ಅನಾವರಣ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟನೆಗಳು ಸಹ ನಡೆಯಲಿದೆ.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ಕುಮಾರ ಶೆಟ್ಟಿ ನೆಂಪು, ಗೌರವಾಧ್ಯಕ್ಷರಾದ ಕೆ.ನಾರಾಯಣ ಶೆಟ್ಟಿ, ಕಾರ್ಯದರ್ಶಿ ರವಿರಾಜ್ ಶೆಟ್ಟಿ ಚಿತ್ತೂರು, ಖಜಾಂಜಿ ಸುಧಾಕರ ನೆಂಪು, ಸಲಹಾ ಸಮಿತಿ ಅಧ್ಯಕ್ಷ ಎನ್. ಆನಂದ ಶೆಟ್ಟಿ ಸಬ್ಲಾಡಿ, ಕಾರ್ಯದರ್ಶಿ ಎಚ್.ನವೀನ್ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.







