ಕಲೆಯ ಉಳಿವು ಜನರ ಕಲಾಸಕ್ತಿಯನ್ನು ಅವಲಂಬಿಸಿದೆ: ತಲ್ಲೂರು

ಉಡುಪಿ, ಮೇ 4: ಯಾವುದೇ ಪ್ರಕಾರದ ಕಲೆಯನ್ನು ಉಳಿಸಿ ಬೆಳೆಸ ಬೇಕಾದರೆ ಕಲಾಸಕ್ತರನ್ನು ತೊಡಗಿಸಿಕೊಳ್ಳುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರೋತ್ಸಾಹ ಧಾರ್ಮಿಕ ಕೇಂದ್ರಗಳಿಂದ ಸಿಗುತ್ತಿರುವುದು ಸಂತೋಷದ ಸಂಗತಿ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಉಡುಪಿ ಕನ್ನರ್ಪಾಡಿಯ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ನೂತನವಾಗಿ ಆರಂಭಿಸಲಾದ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ಯನ್ನು ಉದ್ಘಾಟಿಸಿ ಇತ್ತೀಚೆಗೆ ಅವರು ಮಾತನಾಡುತಿದ್ದರು.
ಈ ಹಿಂದೆ ಕಲೆಗಳಿಗೆ ರಾಜಾಶ್ರಯವಿತ್ತು. ಆದರೆ ಇಂದು ಸರಕಾರಗಳು, ಅಭಿಮಾನಿಗಳ ಪ್ರೋತ್ಸಾಹ ಯಕ್ಷಗಾನಕ್ಕೆ ಲಭ್ಯವಿದೆ. ನಮ್ಮ ರಾಜ್ಯ ಸರಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಯಕ್ಷ ಗಾನ ಕಲೆಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದಾರೆ. ಸರಕಾರ ನೀಡುವ ಅನುದಾನವನ್ನು ಯಕ್ಷಗಾನ ಅಕಾಡೆಮಿ ಅರ್ಹ ಕಾರ್ಯಕ್ರಮಗಳಿಗೆ ನೀಡುತ್ತಿದೆ. ಮಕ್ಕಳ ಯಕ್ಷಗಾನ, ಹಿರಿಯ ಕಲಾವಿದರ ಹೆಸರಿನಲ್ಲಿ ಸಪ್ತಾಹ, ಯಕ್ಷಗಾನ ತರಬೇತಿಯಂತಹ ಕಾರ್ಯಕ್ರಮಗಳಿಗೆ ಅಕಾಡೆಮಿ ಸಹಕಾರ ನೀಡುತ್ತಿದೆ ಎಂದರು.
ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್ ಮಾತನಾಡಿ, ಯಕ್ಷಗಾನ ಕಲಿಕೆಯಿಂದ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಆಗುತ್ತಿರುವುದನ್ನು ನಾವು ಕಂಡಿದ್ದೇವೆ. ಪ್ರಸ್ತುತ ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಲ್ಲಿ 3000ದಷ್ಟು ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಇದರಲ್ಲಿ ಮೂರನೇ ಎರಡರಷ್ಟು ಹೆಣ್ಮಕ್ಕಳಿರುವುದು ಹೆಮ್ಮೆಯ ಸಂಗತಿ ಎಂದರು.
ಮೇಳದ ಗೌರವಾಧ್ಯಕ್ಷ ಎಚ್.ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ಯಕ್ಷಗಾನ ಗುರು ವಾಗೀಶ್ವರ ರಾವ್ ಕಲ್ಮಂಜೆ ಹಾಗೂ ಭಾಗವತ ಕೇಶವ ಆಚಾರ್ ನೀಲಾವರ ಇವರನ್ನು ಅಭಿನಂದಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಯಕ್ಷಗಾನ ಮೇಳದ ಅಧ್ಯಕ್ಷ ರಾಘವೇಂದ್ರ ಭಟ್, ಕಿನ್ನಿಮುಲ್ಕಿ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಜೇಂದ್ರ ಎಂ.ಎನ್., ಕಡೆಕಾರು ಗ್ರಾಪಂ ಮಾಜಿ ಸದಸ್ಯ ನಾರಾಯಣ ರಾವ್, ಕಿನ್ನಿಮುಲ್ಕಿ ಬ್ರಹ್ಮ ಬೈದರ್ಕಳ ಗರೋಡಿಯ ಅರ್ಚಕ ಭಾಸ್ಕರ ಸುವರ್ಣ, ಕಡೆಕಾರ್ ಗ್ರಾಪಂ ಮಾಜಿ ಸದಸ್ಯೆ ಆಶಾ ತಿಲಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







