ಅನುಮೋದನೆಗೊಂಡ ನರೇಗಾ ಕಾಮಗಾರಿ ಆರಂಭಿಸಲು ಮನವಿ

ಬೈಂದೂರು, ಮೇ 4: ಹಿಂದಿನ ಸಾಲಿನ ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಕ್ರಿಯಾ ಯೋಜನೆಯಲ್ಲಿ ಅಳವಡಿಸಲಾದ ಅತೀ ಬೇಡಿಕೆಯ ವೈಯುಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು 2025-26ನೇ ಚಾಲ್ತಿ ಸಾಲಿನಲ್ಲಿ ಮುಂದುವರಿಸುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ನರೇಗಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ನರೇಗಾ ಹಿಂದಿನ ಆರ್ಥಿಕ ವರ್ಷಗಳ ಕ್ರಿಯಾ ಯೋಜನೆಗಳಲ್ಲಿ ಸೇರ್ಪಡೆಯಾಗಿರುವ ಮತ್ತು ಇನ್ನೂ ಪ್ರಾರಂಭಿಸದೇ ಇರುವ ತೆರೆದ ಬಾವಿ, ದನದ ಹಟ್ಟಿ, ಕೋಳಿಗೂಡು ಸೇರಿದಂತೆ ವೈಯುಕ್ತಿಕ ಕಾಮಗಾರಿ ಗಳು ಹಾಗೂ ತೋಡು ಹೂಳೆತ್ತುವಿಕೆ, ಶಾಲೆ/ಅಂಗನವಾಡಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಸಮುದಾಯ ಕಾಮಗಾರಿಗಳನ್ನು ಚಾಲ್ತಿ 2025-26 ನೇ ಸಾಲಿನಲ್ಲಿ ಪ್ರಾರಂಭಿಸಲು ರಾಜ್ಯಮಟ್ಟದ ನರೇಗಾ ಆಯುಕ್ತಾಲಯದಿಂದ ತಾತ್ಕಾಲಿಕ ತಡೆ ಆದೇಶ ಬಂದ ಹಿನ್ನಲೆಯಲ್ಲಿ ಪ್ರಸ್ತುತ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಇತ್ತೀಚಿಗೆ ಕ್ಷೇತ್ರದ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳ ಸಭೆಯಲ್ಲಿ ಹಿಂದಿನ ಸಾಲಿನ ಕ್ರಿಯಾ ಯೋಜನೆಗಳಲ್ಲಿ ಅನುಮೋದನೆ ಗೊಂಡಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಗ್ರಹ ಬಂದ ಹಿನ್ನಲೆಯಲ್ಲಿ ತೆರೆದ ಬಾವಿ ಹಾಗೂ ತೋಡು ಹೂಳೆತ್ತುವ ಕಾಮಗಾರಿ ಬೇಸಿಗೆ ಹಾಗೂ ಮಳೆಗಾಲದ ಮುಂಜಾಗೃತ ಕ್ರಮಗಳಿಗೆ ಪೂರಕವಾಗಿರುವುದರಿಂದ ಅಂತಹ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮವಹಿಸಲು ಸಂಬಂದಿಸಿದ ಅಧಿಕಾರಿ ಗಳಿಗೆ ಶಾಸಕರು ಸೂಚನೆ ನೀಡಿದ್ದರು. ಇದಾದ ನಂತರ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಈ ಬಗ್ಗೆ ನರೇಗಾ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ.







