ಗುರುಪುರ: ಮಹಾಕಾಲೇಶ್ವರ ಏಕಶಿಲಾ ಮೂರ್ತಿಗೆ ಪ್ರತಿಷ್ಠಾ ಬ್ರಹ್ಮಕಲಶ

ಉಡುಪಿ: ಮಂಗಳೂರಿನ ಗುರುಪುರದ ಪಲ್ಗುಣಿ ನದಿ ತಟದಲ್ಲಿ ಪುನರುತ್ಥಾನಗೊಂಡಿರುವ ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಪ್ರತಿಷ್ಠಾನ ಬ್ರಹ್ಮಕಲಶ ಇದೇ ಮೇ 15ರಿಂದ 17ರವರೆಗೆ ಗುರುಪುರ ಶ್ರೀಗುರು ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡದ ಮಾಜಿ ಸಂಸದ ಹಾಗೂ ಬ್ರಹ್ಮಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 16ರಂದು ಗುರುವಾರ ಸಂಜೆ 4ರಿಂದ ಜರಗಲಿರುವ ಪಂಚ ಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕವನ್ನು ಜಾತಿ-ಪಂಗಡ-ಲಿಂಗ ಬೇಧ ವಿಲ್ಲದೇ ಎಲ್ಲರೂ ನಡೆಸಬಹುದಾಗಿದೆ ಎಂದರು.
ಗುರುಪುರ ಶ್ರೀಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಶ್ರೀಗುರುಮಹಾಕಾಲೇಶ್ವರ ದೇವಸ್ಥಾನದ ಆಡಳಿತಗಾರರು ಹಾಗೂ ಸುಕ್ಷೇತ್ರಾಧ್ಯಕ್ಷರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಮಾತನಾಡಿ, ವೇದಕೃಷಿಕ, ಬ್ರಹ್ಮಋಷಿ ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಗುರುಗಳ ಮಾರ್ಗದರ್ಶನದಂತೆ ಹಾಗೂ ನಿರ್ದೇಶನದಲ್ಲಿ ಗುರುಪುರ ಪಲ್ಗುಣಿ ನದಿ ತಟದಲ್ಲಿ ಈ ಕ್ಷೇತ್ರವನ್ನು ಪುನರುತ್ಥಾನಗೊಳಿಸಲಾಗಿದೆ ಎಂದರು.
ಇಲ್ಲಿನ ರಮಣೀಯ ಪ್ರಾಕೃತಿಕ ಸುಂದರ ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ೪೫.೫ ಅಡಿ ಎತ್ತರದ ಬೃಹತ್ ಏಕಶಿಲಾ ಮೂರ್ತಿ ಕಲಶಾಭಿಷೇಕವನ್ನು ಯಾವುದೇ ಜಾತಿ-ಪಂಥದ ಬೇಧವಿಲ್ಲದೇ ಎಲ್ಲರೂ ನಡೆಸಬಹುದಾಗಿದೆ. ಅದೇ ರೀತಿ ಮುಂದೆ ಭಕ್ತರೇ ಇಲ್ಲಿ ಆರಾಧನೆ, ಅರ್ಚನೆ, ಪೂಜೆಯನ್ನು ನಡೆಸಲು ಎಲ್ಲರಿಗೂ ಅವಕಾಶವಿದೆ ಎಂದರು.
ಮಹಾಕಾಲೇಶ್ವರ ಏಕಶಿಲಾಮೂರ್ತಿಯಲ್ಲಿ ೨೨.೫ ಅಡಿ ಪೀಠ ಹಾಗೂ ೨೩ಅಡಿ ದೇವತಾ ವಿಗ್ರಹವಿದೆ. ದಕ್ಷಿಣ ಭಾರತದ ಮೊದಲ ಕಾಲೇಶ್ವರ ಮೂರ್ತಿ ಇದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಚಂದ್ರಹಾಸ ಅಮೀನ್, ದಿವಾಕರ ಸಾಮಾನಿ, ಸುಜಾತ ಸದಾನಂದ್, ನವೀನ್ ಶೆಟ್ಟಿ, ರೋಹಿತ್‌ಕುಮಾರ್ ಕಟೀಲ್ ಉಪಸ್ಥಿತರಿದ್ದರು.







