ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮುಂದುವರಿಸಲು ಆಗ್ರಹ

ಕುಂದಾಪುರ: ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಇ-ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಕರ್ತವ್ಯದಲ್ಲಿ ಅಧಿಕೃತವಾಗಿ ಮುಂದುವರಿಸಬೇಕೆಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.
ಮಂಗಳವಾರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿದ ಶಾಸಕರು ಸ್ಥಳದಲ್ಲೇ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಫೋನ್ ಕರೆ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸು ವಂತೆ ಸೂಚಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳನ್ನ ಕಡಿತಗೊಳಿಸಲಾಗುತ್ತಿದೆ. ಹಾಗೆಯೇ ಕುಂದಾಪುರ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದ 5 ಮಂದಿ ಡಾಟಾ ಎಂಟ್ರಿ ಆಪರೇಟರ್ಗಳಲ್ಲಿ ನಾಲ್ವರನ್ನು ತೆಗೆಯಲಾಗಿದೆ. ಇದರಿಂದ ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಸ್ಯೆಯಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿದೆ ಎಂದರು.
ಡಾಟಾ ಎಂಟ್ರಿ ಮಾಡುವ ಸಿಬ್ಬಂದಿಗೆ ವೇತನ ನೀಡಲಾಗದೆ ಅವರನ್ನು ತೆಗೆಯುವುದಾದರೆ ಆಸ್ಪತ್ರೆಯ ಸ್ಥಿತಿ ಹಾಳಾಗಲಿದೆ. ಅವರನ್ನು ಅಧೀಕೃತವಾಗಿ ನೇಮಕಗೊಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ. ಜಿಲ್ಲೆಯ ಎಲ್ಲಾ ಶಾಸಕರು ಸಮಸ್ಯೆ ಬಗ್ಗೆ ಧ್ವನಿಯಾಗುತ್ತೇವೆ. ಎಲ್ಲಾ ಇಲಾಖರಯಲ್ಲಿಯೂ ಹೊರಗುತ್ತಿಗೆ ನೌಕರರನ್ನು ತೆಗೆಯುವುದು ಹಾಗೂ ಸಂಬಳ ನೀಡದೆ ಇರುವ ಬಗ್ಗೆ ದೂರುಗಳು ಕೇಳಿಬಂದಿದೆ ಎಂದವರು ತಿಳಿಸಿದರು.





