ಪೋಪ್ ಫ್ರಾನ್ಸಿಸ್ ಬ್ಯಾನರ್‌ಗೆ ಹಾನಿ: ಅಂಬೇಡ್ಕರ್ ಯುವಸೇನೆ ಖಂಡನೆ

ಮಲ್ಪೆ, ಮೇ 6: ರೋಮ್‌ನಲ್ಲಿ ಇತ್ತೀಚೆಗೆ ನಿಧನರಾದ ಫೋಪ್ ಫ್ರಾನ್ಸಿಸ್‌ರವರ ಆತ್ಮಕ್ಕೆ ಚಿರಶಾಂತಿ ಕೋರಿ ಹಾಕಿರುವ ಫ್ಲಕ್ಸ್ ಬ್ಯಾನರಿಗೆ ಹಾನಿಮಾಡಿರುವ ಘಟನೆಯನ್ನು ಅಂಬೇಡ್ಕರ್ ಯುವಸೇನೆ ಖಂಡಿಸಿದೆ.
ಮಲ್ಪೆ ವಡಭಾಂಡೇಶ್ವರದ ಪೊಲೀಸ್ ಠಾಣೆಯ ಎದುರಿಗೆ ಹಾಕಿರುವ ಈ ಬ್ಯಾನರನ್ನು ರವಿವಾರ ಮಧ್ಯರಾತ್ರಿ ಕೆಲವು ಸಮಾಜ ಘಾತುಕ ದುಷ್ಕರ್ಮಿಗಳು ಬ್ಯಾನರಿನ ಹಿಂಬದಿಯಿಂದ ಬಂದು ಹರಿದು ಹಾಕುತ್ತಿರುವುದು ಪಕ್ಕದ ಸಿ.ಸಿ.ಕ್ಯಾಮರದಲ್ಲಿ ದಾಖಲಾಗಿದೆ.
ಬ್ಯಾನರಿಗೆ ಹಾನಿಮಾಡಿರುವ ಬಗ್ಗೆ ಸಂಬಂಧಪಟ್ಟವರು ದೂರು ನೀಡದಿದ್ದರೂ, ಪೊಲೀಸ್ ಠಾಣೆಯ ಎದುರೇ ಈ ರೀತಿ ದುಷ್ಕೃತ್ಯ ನಡೆದರೂ ಮೌನವಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿದೆ.
ಮಲ್ಪೆ ಪೊಲೀಸರು ಸುಮೊಟೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ವಡಭಾಂಡೇಶ್ವರದ ಸುತ್ತುಮುತ್ತಲಿನ ಸಿ.ಸಿ.ಕ್ಯಾಮರವನ್ನು ತಪಾಸಣೆ ಮಾಡಿದರೆ ಆರೋಪಿಗಳನ್ನು ಪತ್ತೆಹಚ್ಚಬಹುದಾಗಿದ್ದು, ಆದರೆ ಈ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನೀಯ ಎಂದು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





