ಭಾರತೀಯ ಸೇನೆ ಹೆಸರಿನಲ್ಲಿ ದೇವಳಗಳಲ್ಲಿ ವಿಶೇಷ ಪೂಜೆ

ಉಡುಪಿ, ಮೇ 8: ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಸೂಚನೆಯ ಮೇರೆಗೆ ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಇಂದು ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗುವಂತೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಕನ್ನರ್ಪಾಡಿ ಶ್ರೀಜಯದುರ್ಗ ಪರಮೇಶ್ವರಿ ದೇವಸ್ಥಾನ, ಕೋಟ ಹಲವು ಮಕ್ಕಳು ತಾಯಿ ಶ್ರೀಕ್ಷೇತ್ರ ಅಮೃತೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಿ ಕರುಣಿಸಲಿ ಎಂದು ವಿಶೇಷ ಸಂಕಲ್ಪದೊಂದಿಗೆ ವಿಶೇಷ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕೋಟ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್, ಸದಸ್ಯರಾದ ಸುಬ್ರಾಯ ಜೋಗಿ(ಅರ್ಚಕ ಪ್ರತಿನಿಧಿ), ಚಂದ್ರ ಆಚಾರ್ ಕೋಟ, ಶಿವ ಪೂಜಾರಿ ಮಣ್ಣೂರು, ಗಣೇಶ್ ಕೆ ನೆಲ್ಲಿಬೆಟ್ಟು, ಸುಭಾಸ್ ಶೆಟ್ಟಿ ಗಿಳಿಯಾರ್, ಸುಧಾ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ರತನ್ ಐತಾಳ್ ಕೋಟ ಉಪಸ್ಥಿತರಿದ್ದರು.





