ಪ್ರವಾಸಿ ತಾಣವಾಗಿ ಮರವಂತೆ ಸಮಗ್ರ ಅಭಿವೃದ್ಧಿಗೆ ಅಗತ್ಯಕ್ರಮ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಕುಂದಾಪುರ, ಮೇ 8: ಉಡುಪಿ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಮರವಂತೆಯಲ್ಲಿ ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಹಾಗೂ ಮದ್ಯೆ ರಸ್ತೆಯಿದ್ದು ಇದೊಂದು ಅದ್ಭುತ ಪ್ರಾಕೃತಿಕ ಸೌಂದರ್ಯದ ಪ್ರದೇಶವಾಗಿದೆ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಯೋಜನೆ ಸಿದ್ಧಪಡಿಸಿ ನೀಡಿದಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಗುರುವಾರ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಅವರು ಸಂಜೆ ತ್ರಾಸಿ- ಮರವಂತೆ ಸಮುದ್ರ ತೀರ ವೀಕ್ಷಣೆ ಬಳಿಕ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಬೈಂದೂರು ಕ್ಷೇತ್ರದ ಕೊಲ್ಲೂರು ಸಹಿತ ಮರವಂತೆ, ಸೋಮೇಶ್ವರ ಬೀಚ್ ಅಭಿವೃದ್ಧಿಯ ಕುರಿತು ತಿಂಗಳ ಹಿಂದೆ ಸ್ಥಳೀಯ ಶಾಸಕರು ಹಾಗೂ ಮುಖಂಡರ ಜೊತೆಗೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಚರ್ಚಿಸ ಲಾಗಿತ್ತು ಎಂದರು.
‘ಸಾಸಿ’ ಎನ್ನುವ ಯೋಜನೆಯಡಿ ಪಡುವರಿ-ಸೋಮೇಶ್ವರ, ಮರವಂತೆ ಹಾಗೂ ಕೊಲ್ಲೂರು ದೇವಸ್ಥಾನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬೇಡಿಕೆಯಿಟ್ಟು ಪ್ರಸ್ತಾವನೆ ಕಳಿಸಲಾಗಿತ್ತು. ಗುರುವಾರ ಕೇಂದ್ರ ಮಂತ್ರಿಗಳು ಈ ಮೂರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ನಿರೀಕ್ಷೆಯಿದೆ ಎಂದರು.
ಸ್ಕೈಡೈನಿಂಗ್‌ನಲ್ಲಿ ಸಚಿವರು: ಇದಕ್ಕೂ ಮೊದಲು ಕೇಂದ್ರ ಸಚಿವರು ಮರವಂತೆಯಲ್ಲಿ ಕೆಲ ತಿಂಗಳ ಹಿಂದೆ ಆರಂಭಗೊಂಡ ಸ್ಕೈ ಡೈನಿಂಗ್‌ನಲ್ಲಿ ಕುಳಿತು ಮರವಂತೆಯ ಅದ್ಭುತ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿದರು.
ಈ ಸಂದರ್ಭ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಕುಂದಾಪುರ ಉಪವಿಭಾಗಾ ಧಿಕಾರಿ ರಶ್ಮೀ ಎಸ್.ಆರ್., ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಕಳ ವರದಿ: ಇಂದು ಬೆಳಗ್ಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾರ್ಕಳಕ್ಕೆ ಭೇಟಿ ನೀಡಿ ಇಲ್ಲಿನ ಆನೆಕೆರೆ ಬಸದಿ ಮತ್ತು ರಾಮಸಮುದ್ರ ಕೆರೆಗಳನ್ನು ವೀಕ್ಷಿಸಿದರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಈ ಪ್ರದೇಶವನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವ ನೀಲನಕಾಶೆ ಬಗ್ಗೆ ಸಚಿವರಿಗೆ ವಿವರಿಸಿ, ಈ ಬಗ್ಗೆ ವಿವರವಾಗಿ ಚರ್ಚಿಸಿದರು.
116 ಕೋಟಿ ರೂ.ಅನುದಾನ: ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು ಕಾರ್ಕಳದ ಆನೆಕೆರೆ ಹಾಗೂ ವರಂಗ ಜೈನಬಸದಿಗಳ ಅಭಿವೃದ್ದಿಗಾಗಿ ಸ್ವದೇಶಿ ದರ್ಶನ್ ಯೋಜನೆಯಡಿಯಲ್ಲಿ 116 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದರು. ಆನೆಕೆರೆ ಮತ್ತು ರಾಮಸಮುದ್ರ ಪ್ರದೇಶವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.
ಭಾರತವು ವಿವಿಧತೆಯಿಂದ ಕೂಡಿದ್ದು, ವಿವಿಧತೆಯಿಂದ ಏಕತೆಗೆ ಜೋಡಿಸುವ ಕೆಲಸವನ್ನು ಧಾರ್ಮಿಕ ಕೇಂದ್ರಗಳು ಮಾಡುತ್ತಿವೆ. ಭಾರತದ ದಾರ್ಶನಿಕ ಹಾಗೂ ಪ್ರೇಕ್ಷಣಿಯ ಸ್ಥಳಗಳ ಉನ್ನತೀಕರಣಕ್ಕಾಗಿ ಹಾಗೂ ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯದ ಉನ್ನತೀಕರಣಕ್ಕೂ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದವರು ಹೇಳಿದರು.
ಸಚಿವರ ಕಾರ್ಕಳ ಭೇಟಿ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ.ಸುನೀಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಕುಂದಾಪುರ ಎಸಿ ರಶ್ಮಿ, ತಹಶೀಲ್ದಾರ್ ಪ್ರದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ್, ಬಿಜೆಪಿ ಹಿರಿಯ ಮುಖಂಡ ಎಂ.ಕೆ.ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಆಂತೋನಿ ಡಿಸೋಜ ನಕ್ರೆ, ಆನೆಕೆರೆ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಮಹೇಂದ್ರ ವರ್ಮ ಜೈನ್, ಸಂಪತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಕುಮಾರ್ ಜೈನ್, ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಮಹಾವೀರ್ ಜೈನ್ ಶಿರ್ಲಾಲು, ಗೇರು ಅಭಿವೃಧ್ದಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜೈನ ಸಮುದಾಯದ ಪ್ರಮುಖರಾದ ಎನ್.ಪ್ರಭಾತ್, ದೇವರಾಜ್ ಅಧಿಕಾರಿ, ಜಗದೀಶ್ ಹೆಗ್ಡೆ, ಪುರಸಭಾ ಮಾಜಿ ಸದಸ್ಯ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.







