ನಾಗಸ್ವರ ವಾದಕ ಬೊಗ್ರ ಶೇರಿಗಾರ್ ನಿಧನ

ಉಡುಪಿ, ಮೇ 8: ಹಿರಿಯ ನಾಗಸ್ವರ ಹಾಗೂ ಸ್ಯಾಕ್ಸೋಫೋನ್ ವಾದಕವಾದ ಅಲೆವೂರು ಬೊಗ್ರ ಶೇರಿಗಾರ (94) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಪ್ರಸಿದ್ಧ ನಾಗಸ್ವರ ವಾದಕ ಉದಯ ಶೇರಿಗಾರ್ ಸೇರಿದಂತೆ ನಾಲ್ವರು ಪುತ್ರರು ಆಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕರಾವಳಿಯ ಉಡುಪಿ ಮತ್ತು ಮಂಗಳೂರುಗಳಲ್ಲಿ ಪ್ರಸಿದ್ಧ ನಾಗಸ್ವರ ಹಾಗೂ ಸ್ಯಾಕ್ಸೊಫೋನ್ ವಾದಕ ರಾಗಿ ಹೆಸರಾಗಿದ್ದ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ, ಗೌರವಾರ್ಪಣೆ, ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಪಾರವಾದ ಶಿಷ್ಯರನ್ನು ಕೂಡ ಇವರು ಹೊಂದಿದ್ದರು.
ನಾಗಸ್ವರ ವಾದನದ ಮೊಟ್ಟ ಮೊದಲ ಕ್ಯಾಸೆಟ್ ಮೂಡಿ ಬಂದದ್ದು ಬೊಗ್ರ ಶೇರಿಗಾರ್‌ರಿಂದ ಕರಾವಳಿಯ ಅಸಂಖ್ಯಾತ ದೇವಸ್ಥಾನ, ಗರೋಡಿ, ದೈವಸ್ಥಾನ ಹಾಗೂ ನಾಗರಾಧನೆಗಳಲ್ಲಿ ಹಿರಿಯ ನಾಗಸ್ವರ ವಾದಕರಾಗಿ ಅಲೆವೂರು ಬೊಗ್ರ ಶೇರಿಗಾರ್ ಪ್ರಸಿದ್ಧಿ ಪಡೆದಿದ್ದರು. ಇವರು ನುಡಿಸುವ ನಾಗಿಣಿ ಪದ ಭಾರಿ ಜನಪ್ರಿಯವಾಗಿತ್ತು.
ನಾಗಸ್ವರ ಆರಾಧನೆಯನ್ನು ಆತ್ಮಸಮರ್ಪಣಾ ಭಾವದಿಂದ ಮಾಡುತಿದ್ದ ಬೊಗ್ರ ಶೇರಿಗಾರ್, ಪಾರಂಪರಿಕ ಶೈಲಿಯಲ್ಲಿ ಕಲಾ ಸೇವೆ ಮಾಡಿದ ಅಪರೂಪದ ಕಲಾವಿದರು.





