ತುರ್ತು ಪರಿಸ್ಥಿತಿ ಎದುರಿಸಲು ಸರ್ವ ಸಿದ್ಧತೆ: ಉಡುಪಿ ಡಿಸಿ ವಿದ್ಯಾಕುಮಾರಿ

ಡಾ. ವಿದ್ಯಾಕುಮಾರಿ
ಉಡುಪಿ, ಮೇ 11: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಎದುರಾಗಿರುವ ಸಂಘರ್ಷದ ವಾತಾವರಣದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಅದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಉಡುಪಿ ಜಿಪಂ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುವಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 160 ಕಾಳಜಿ ಕೇಂದ್ರಗಳನ್ನು ಗುರು ತಿಸಿ ಸಿದ್ಧವಾಗಿ ಇಟ್ಟು ಕೊಳ್ಳಲಾಗಿದೆ. 50ಕ್ಕಿಂತ ಅಧಿಕ ಬೆಡ್ಗಳಿರುವ 54 ಆಸ್ಪತ್ರೆಗಳು ನಮ್ಮಲ್ಲಿವೆ. ಮುಂದೆ ಆಸ್ಪತ್ರೆಗಳ ಪ್ರಮುಖರ ಸಭೆ ಕರೆದು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಕಾರ ನೀಡುವಂತೆ ಸೂಚಿಸಲಾಗುವುದು ಎಂದರು.
ಅಗತ್ಯ ಬಿದ್ದರೆ ಮಣಿಪಾಲ ವಿದ್ಯಾಸಂಸ್ಥೆಗಳ ಹಾಸ್ಟೆಲ್ಗಳನ್ನು ಕೂಡ ಬಳಸಿ ಕೊಳ್ಳಲು ಈಗಾಗಲೇ ತಯಾರಿ ಮಾಡಿಕೊಂಡಿದ್ದೇವೆ. ಸುರಕ್ಷತೆ ಸಂಬಂಧ ಮುಖ್ಯಮಂತ್ರಿ ವಿಸಿಯ ಮೂಲಕ ಸಂಪೂರ್ಣ ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರದ ಮಾರ್ಗದರ್ಶನದಂತೆ ನಾವು ಮಾಡುತ್ತಿದ್ದೇವೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಕಂಟ್ರೋಲ್ ರೂಮ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.
ಅಗ್ನಿ ಶಾಮಕದಳದವರಿಗೆ ಸಿದ್ಧರಾಗಿರುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಮೇ 12ರಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಲಾಗುತ್ತದೆ. 400 ಮಂದಿ ಎನ್ಸಿಸಿ ಹಾಗೂ ಎನ್ಎಸ್ಎಸ್ನ ಸ್ವಯಂ ಸೇವಕರಿಗೂ ತರಬೇತಿ ನೀಡಲಾಗುತ್ತದೆ ಮತ್ತು ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ಮಾಡಿ ತೋರಿಸಲಾಗುವುದು ಎಂದು ಅವರು ತಿಳಿಸಿದರು.
ಕರಾವಳಿ ಕಾವಲು ಪೊಲೀಸ್ನ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಕಡಲ ತಡಿಯಲ್ಲಿ ಹೈ ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ. ಅದೇ ರೀತಿ ನಾಗರಿಕ ಸುರಕ್ಷತಾ ಅಣಕು ಕಾರ್ಯಾಚರಣೆ ಮಾಡಲು ನಿರ್ದೇಶನ ನೀಡಿದ್ದಾರೆ. ಅದರಂತೆ ಮಲ್ಪೆಯ ಶಿಪ್ಯಾರ್ಡ್ನಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ಮಣಿಪಾಲ ಕೆಎಂಸಿಯಲ್ಲಿಯೂ ಹಿರಿಯ ಮಿಲಿಟರಿ ಅಧಿಕಾರಿಗಳಿಂದ ತರಬೇತಿ ಮತ್ತು ಮಾಹಿತಿ ನೀಡಲಾ ಗಿದೆ. ಅಲ್ಲಿ ಶನಿವಾರ ಎರಡು ಹಂತದಲ್ಲಿ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಮೀನುಗಾರ ತಜ್ಞರನ್ನು ಗುರುತಿಸಿ ತರಬೇತಿ ನೀಡುವ ಕಾರ್ಯವನ್ನು ಕರಾವಳಿ ಕಾವಲು ಪೊಲೀಸರು ಮಾಡಲಿದ್ದಾರೆ. ಸಮುದ್ರದಲ್ಲಿ ಅಪರಿಚಿತ ಬೋಟು ಅಥವಾ ವ್ಯಕ್ತಿ ಕಂಡುಬಂದರೆ ತಕ್ಷಣ ಮಾಹಿತಿ ಕೊಡ ಬೇಕೆಂದು ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಪೊಲೀಸರು ಮೀನುಗಾರ ಮುಖಂಡ ರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಾಹಿತಿ ನೀಡಿದರು.







