ಹಾಸ್ಯ ಕಲಾವಿದ ಹೂಡೆಯ ರಾಕೇಶ್ ಪೂಜಾರಿ ನಿಧನ

ಉಡುಪಿ, ಮೇ 12: ಖಾಸಗಿ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಸೀಸನ್ -3ರ ವಿನ್ನರ್, ನಟ, ಹಾಸ್ಯ ಕಲಾವಿದ, ಉಡುಪಿ ಸಮೀಪದ ತೋನ್ಸೆ ಹೂಡೆಯ ರಾಕೇಶ್ ಪೂಜಾರಿ(34) ಸೋಮವಾರ ನಸುಕಿನ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ರಾಕೇಶ್ ಪೂಜಾರಿ, ಬಳಿಕ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಎದೆನೋವು ಕಾಣಿಸಿ ಕೊಂಡಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ರಾಕೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇವರು ತಾಯಿ ಶಾಂಭವಿ, ಸಹೋದರಿ ರಕ್ಷಿತಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದ್ಭುತ ಹಾಸ್ಯ ಕಲಾವಿದ: ‘ಚೈತನ್ಯ ಕಲಾವಿದರು’ ನಾಟಕ ತಂಡದ ಮೂಲಕ ನಟನ ಪಯಣ ಆರಂಭಿ ಸಿದ ರಾಕೇಶ್, ಬಳಿಕ 2014ರಲ್ಲಿ ಖಾಸಗಿ ಸ್ಥಳೀಯ ಚಾನೆಲ್‌ನಲ್ಲಿ ತುಳು ರಿಯಾಲಿಟಿ ಶೋದಲ್ಲಿ ಮಿಂಚಿದ್ದರು. 2018 ರಲ್ಲಿ ಜೀ ಕನ್ನಡ ’ಕಾಮಿಡಿ ಕಿಲಾಡಿಗಳು ಸೀಸನ್ 2’ ಶೋಗೆ ಆಯ್ಕೆಯಾಗಿದ್ದರು. ಇದರಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ ’ಕಾಮಿಡಿ ಕಿಲಾಡಿಗಳು ಸೀಸನ್ 3’ ವಿಜೇತರಾಗಿದ್ದರು.
ರಾಕೇಶ್ ಕನ್ನಡ ಮತ್ತು ತುಳುವಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕೇಶ್ ಕನ್ನಡದಲ್ಲಿ ’ಪೈಲ್ವಾನ್’, ’ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ’ಪೆಟ್ಕಮ್ಮಿ’, ’ಅಮ್ಮೆರ್ ಪೊಲೀಸ್’, ’ಪಮ್ಮನ್ನೆ ದಿ ಗ್ರೇಟ್’, ’ಉಮಿಲ್’, ’ಇಲ್ಲೋಕ್ಕೆಲ್’ ಸೇರಿದಂತೆ ಹಲವು ಸಿನಿಮಾ ಗಳಿಗೆ ಬಣ್ಣ ಹಚ್ಚಿದ್ದರು. ಇನ್ನು ಕರಾವಳಿಯ ರಿಯಾಲಿಟಿ ಶೋಗಳಾದ ’ಬಲೆ ತೇಲಿಪಾಲೆ’, ’ಮೇ 22’, ’ಸ್ಟಾರ್’, ’ತುಯಿನಾಯೆ ಪೋಯೆ’ ಸೇರಿದಂತೆ ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರಸ್ತುತ ಅವರು ಕಾಂತರ ಭಾಗ ಒಂದರಲ್ಲೂ ನಟಿಸುತ್ತಿದ್ದರು.
ಅಂತಿಮ ದರ್ಶನ: ಹೂಡೆಯ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಹೂಡೆ ಸಮುದ್ರ ತೀರದ ಮೈದಾನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಚಲನಚಿತ್ರ ಹಾಗೂ ಕಿರುತೆರೆ ನಟನಟಿಯರು, ಅಭಿಮಾನಿಗಳು, ಗ್ರಾಮಸ್ಥರು, ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದರು. ನಂತರ ಸಮೀಪದ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು. ಸಂಜೆ ಹೂಡೆಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಚಿತ್ರನಟಿ ರಕ್ಷಿತಾ ಪ್ರೇಮ್, ನಟ ಮಾಸ್ಟರ್ ಆನಂದ್, ನಿರೂಪಕಿ ಅನುಶ್ರೀ, ನಿರ್ದೇಶಕ ಯೋಗರಾಜ್ ಭಟ್, ಹಾಸ್ಯ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಧನರಾಜ್ ಆಚಾರ್ಯ, ಕಾಮಿಡಿ ಕಿಲಾಡಿಗಳ ತಂಡದ ಶಿವರಾಜ್ ಕೆಆರ್ ಪೇಟೆ, ನಯನಾ, ವಾಣಿ, ಸೂರಜ್, ಹಿತೇಶ್, ಅನೀಶ್, ಬಿಗ್ ಬಾಸ್ ಖ್ಯಾತಿಯ ಧನರಾಜ್, ತುಕಾಲಿ ಸಂತು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಂತಿಮ ನಮನ ಸಲ್ಲಿಸಿದರು.
‘ಈ ಅಕಾಲಿಕ ಸಾವು ನೋವು ತಂದಿದೆ. ನಮ್ಮ ತಂಡದ ಮುದ್ದಿನ ನಟನಾಗಿದ್ದನು. ಪ್ರಕೃತಿ ಎಲ್ಲರನ್ನು ಕರೆಸಿಕೊಳ್ಳುತ್ತದೆ ಆದರೆ ಇಷ್ಟು ಬೇಗ ಕರೆಸಿಕೊಳ್ಳುತ್ತೆ ಅಂದುಕೊಂಡಿರಲಿಲ್ಲ. ಕರಾವಳಿ ಭಾಗದಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಪ್ರತಿಭಾನ್ವಿತ ಕಲಾವಿದ, ಜೀವಂತಿಕೆ ಇರುವ ಅಪರೂಪದ ನಟನಾ ಗಿದ್ದ. ಕರಾವಳಿ ಭಾಷೆಯನ್ನು ಇಟ್ಟುಕೊಂಡು ನಗಿಸಿ ಸಹೃದಯರ ಮನ ಗೆದ್ದಿದ್ದು, ಕಾಂತರ ಭಾಗ ಒಂದರಲ್ಲೂ ನಟಿಸುತ್ತಿದ್ದು, ನನ್ನ ನಿರ್ದೇಶನದ ಮನದ ಕಡಲುನಲ್ಲೂ ಅಭಿನಯಿಸಬೇಕಿತ್ತು’
-ಯೋಗರಾಜ್ ಭಟ್, ನಿರ್ದೇಶಕರು,
"ರಾಕೇಶ ಅದ್ಭುತ ನಟ. ಕನ್ನಡ ಚಿತ್ರರಂಗ ಅದ್ಭುತ ಕಲಾವಿದನನ್ನು ಕಳೆದುಕೊಂಡಿದೆ. ನನಗೆ ಆತನಿಗೆ ನಮಸ್ಕಾರ ಮಾಡಲು ಮನಸ್ಸು ಬಂದಿಲ್ಲ. ಕಾಮಿಡಿ ಕಿಲಾಡಿಗಳು ತಂಡಕ್ಕೆ ನನ್ನ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದೆ. ತುಂಬಾ ಚೆನ್ನಾಗಿ ನಟಿಸಿದ್ದ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಅನುಕರಣೆ ಮಾಡುವುದು ಅವನಿಗೆ ಗೊತ್ತಿತ್ತು".
-ಮಾಸ್ಟರ್ ಆನಂದ್, ನಟ
‘ಮನೆಯ ಆಧಾರಸ್ತಂಭವಾಗಿದ್ದ ರಾಕೇಶ್ ಪೂಜಾರಿ ಇಷ್ಟು ಬೇಗ ಹೋಗಿರುವುದು ತುಂಬಾ ನೋವು ತಂದಿದೆ. ಆತನಿಗೆ ಆರು ತಿಂಗಳ ಹಿಂದೆ ಅಪಘಾತವಾಗಿದ್ದಾಗ ನಾವೆಲ್ಲ ಜಾಗೃತೆ ಮಾಡುವಂತೆ ಬೈದಿದ್ದೆವು. ನಮ್ಮ ಜೊತೆ ಊಟ ಮಾಡಿದ್ದಾನೆ, ಕಾಮಿಡಿ ಮಾಡಿದ್ದಾನೆ. ತುಂಬಾ ಒಳ್ಳೆಯ ಹುಡುಗ. ದರ್ಶನ್ ಕೂಡ ಕರೆ ಮಾಡಿ ಈ ಬಗ್ಗೆ ಕೇಳಿದ್ದಾರೆ’
-ರಕ್ಷಿತಾ ಪ್ರೇಮ್, ಚಿತ್ರನಟಿ







