ಕೃತಕ ನೆರೆ ತಡೆಯಲು ಕ್ರಮದಲ್ಲಿ ವಿಳಂಬ: ಉಡುಪಿ ಡಿಸಿ ಅಸಮಾಧಾನ
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

ಉಡುಪಿ: ಮಳೆಗಾಲದಲ್ಲಿ ಮಳೆ ಬಿರುಸುಗೊಂಡಾಗ ಇತ್ತೀಚಿನ ವರ್ಷಗಳಲ್ಲಿ ಕೃತಕ ನೆರೆ ಉಂಟಾಗಿ ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಹಾನಿ ಉಂಟಾಗುತ್ತದೆ. ಕಳೆದ ಮಳೆಗಾಲದಲ್ಲೂ ಉಡುಪಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಈ ಬಾರಿ ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಗರದ ರಾಜ ಕಾಲುವೆ, ತೋಡುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಲು ಎರಡು-ಮೂರು ತಿಂಗಳಿನ ಹಿಂದೆಯೇ ಸೂಚನೆಗಳನ್ನು ನೀಡಲಾಗಿತ್ತು. ಆದರೂ ಸಹ ಇವುಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಅಸಮಧಾನ ಸೂಚಿಸಿದ ಜಿಲ್ಲಾಧಿಕಾರಿಗಳು ಆಯಾ ತಾಲೂಕುಗಳ ತಹಶೀಲ್ದಾರರುಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಸೂಚನೆ ನೀಡಿದರು.
ನದಿಗಳಲ್ಲಿ ಹೂಳು ತುಂಬಿದ ಕಾರಣ ಕೆಲವು ಭಾಗಗಳಲ್ಲಿ ನೀರು ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿದೆ. ಈ ಬಗ್ಗೆ ಕೋಟ ಹಾಗೂ ಇತರ ಭಾಗಗಳ ರೈತರು ಹೂಳುಗಳ ತೆರವಿಗೆ ಮನವಿ ಮಾಡಿದ್ದಾರೆ. ತೆರವು ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಡಾ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಈಗಲೇ ಯೋಜನೆ ರೂಪಿಸಿ: ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆಗಾಲದಲ್ಲಿ ಹೆಚ್ಚು ಮಳೆ ಯಿಂದಾಗಿ ಉಂಟಾಗಬಹುದಾದ ಪ್ರಕೃತಿ ವಿಕೋಪ ವಿಪತ್ತುಗಳ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ತಯಾರಿಯೊಂದಿಗೆ ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸಿಕೊಂಡು, ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು ಎಂದೂ ಅವರು ಅಧಿಕಾರಿಗಳಿಗೆ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಇಲ್ಲ: ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸ್ಪಂದಿಸುವ ಕಾರ್ಯ ಗಳು ಆಗಬೇಕು ಎಂದ ಅವರು, ನೀರಿನ ಗುಣಮಟ್ಟ ಪರೀಕ್ಷೆಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು ಎಂದೂ ಸೂಚನೆಗಳನ್ನು ನೀಡಿದರು.
ಅಪಾಯಕಾರಿಯಾದ ಹಳೆಯ ಮರಗಳು, ಬೇರು ಸಡಿಲಗೊಂಡ ಮರಗಳ ತೆರವು ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಕಳೆದ ಸಾಲಿನಲ್ಲಿ ಮರ ಉರುಳಿ ಬಿದ್ದು ಎರಡು ಮಾನವ ಜೀವ ಹಾನಿ ಉಂಟಾ ಗಿದೆ. ಆದರೆ ಈ ಬಾರಿ ಹೀಗಾಗದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ತೆರವು ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಮಳೆಯಿಂದ ಉಂಟಾದ ಕಟ್ಟಡಗಳ ಹಾನಿ, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದ ಅವರು, ಶಾಲಾ ಕಾಲೇಜುಗಳ ಕಟ್ಟಡಗಳನ್ನು ಪರೀಕ್ಷಿಸಿ, ಅವುಗಳು ಸದೃಢವಾಗಿವೆ ಎಂಬ ದೃಢೀಕರಣ ವನ್ನು ಅಭಿಯಂತರರಿಂದ ಪಡೆಯಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿ ಸಲು ಸನ್ನದ್ಧವಾಗಿರಬೇಕು. ಈ ಸಮಿತಿ ಗಳಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆ ಯರು ಹಾಗೂ ಮಹಿಳೆಯರನ್ನೂ ಸಹ ಸದಸ್ಯರನ್ನಾಗಿಸಬೇಕು. ಗ್ರಾಪಂ ವ್ಯಾಪ್ತಿಯ ವಿಪತ್ತು ನಿರ್ವಹಣಾ ಕಾರ್ಯವನ್ನು ಮಾಡುವ ಕುರಿತು ಯೋಜನೆಗಳನ್ನು ಸಹ ಸಮಿತಿ ರೂಪಿಸಬೇಕು. ಗ್ರಾಪಂ ಮಟ್ಟದಲ್ಲಿ ಯಾವುದೇ ವಿಪತ್ತು ಆದಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ಪಂದಿಸಲು ಮುಂದಾಗಬೇಕು. ಮರಣ ಸಂಭವಿಸಿದ್ದಲ್ಲಿ 24 ಗಂಟೆಯ ಒಳಗೆ ಪರಿಹಾರ ಒದಗಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಸಹಾಯಕ ಕಮಿಷನರ್ ರಶ್ಮಿ ಎಸ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರರು, ಇಓಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
"ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ತಿಳಿಸಿದ್ದರೂ, ಹೆದ್ದಾರಿ ಇಲಾಖೆಯ ಅಭಿಯಂತರರು ಇವುಗಳಿಗೆ ಸ್ಪಂದಿಸದೇ ಇರುವುದು ಕಂಡು ಬಂದಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು".
-ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ.
ಮಳೆ ನೀರು ಕೊಯ್ಲು ಆದ್ಯತೆಯಾಗಲಿ: ಮಳೆ ನೀರು ಕೊಯ್ಲುನ್ನು ಸರಕಾರಿ ಹಾಗೂ ಖಾಸಗಿ ಬೋರ್ ವೆಲ್ ಹಾಗೂ ತೆರೆದ ಬಾವಿಗಳಿಗೆ ಅಳವಡಿಸುವಂತೆ ಕಳೆದ ಸಾಲಿನಲ್ಲಿ ಸೂಚನೆ ನೀಡಲಾಗಿತ್ತು. ಜಿಲ್ಲೆಯ ಗ್ರಾಮೀಣ ಭಾಗಲ್ಲಿ 1616 ತೆರೆದ ಬಾವಿಗಳು ಹಾಗೂ 1554 ಕೊಳವೆ ಬಾವಿಗಳು ಇವೆ. ಆದರೆ ಕ್ರಮ ವಾಗಿ 44 ಹಾಗೂ 93ಗಳಿಗೆ ಮಾತ್ರ ಮಳೆ ನೀರು ಕೊಯ್ಲು ಅಳವಡಿಸಲಾಗಿದೆ. ಇವುಗಳನ್ನು ಆದ್ಯತೆಯ ಮೇಲೆ ಕೂಡಲೇ ಅಳವಡಿಸಬೇಕೆಂದು ಸೂಚನೆ ನೀಡಿದ ಜಿಲ್ಲಾಧಿಕಾರಿ, ಖಾಸಗಿ ಯವರೂ ಸಹ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಅಂತರ್ಜಲ ಹೆಚ್ಚುವುದರ ಜೊತೆಗೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.
‘ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ’
ಭಾರತ-ಪಾಕಿಸ್ತಾನ ದೇಶಗಳ ನಡುವೆ ಉಂಟಾಗಿರುವ ಸಂಘರ್ಷಕರ ವಾತಾವರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯೊಂದಿಗೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕಾಪಾಡಲು ಸೂಚಿಸಲಾಗಿದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಎಚ್ಚರಿಸಿದರು.
ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಅನಗತ್ಯವಾಗಿ ಸಾಮಾಗ್ರಿ ಗಳ ಬೆಲೆ ಹೆಚ್ಚು ಮಾಡುವ ಪ್ರಯತ್ನಗಳನ್ನು ತಡೆಯಲು ಎಚ್ಚರಿಕೆ ವಹಿಸಲಾಗುವುದು ಎಂದ ಅವರು, ಸುರಕ್ಷತೆ ಕುರಿತಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಮಾತನಾಡಿ, ಪಾಕ್ ವಿರುದ್ಧ ಯುದ್ಧ ಸನ್ನದ್ಧ ಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗ್ನಿಶಾಮಕ ದಳ ಕೇಂದ್ರಗಳು 24 ಗಂಟೆಗಳ ಕಾಲ ಸನ್ನದ್ಧ ಸ್ಥಿತಿಯಲ್ಲಿರಲಿವೆ. ಪೌರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು 400ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಈಗಾಗಲೆ ಹದಿನೆಂಟು ವರ್ಷ ಮೇಲ್ಪಟ್ಟ ಎನ್ನೆಸ್ಸೆಸ್ ಹಾಗೂ ಎನ್‌ಸಿಸಿ ಸ್ವಯಂ ಸೇವಕರುಗಳಿಗೂ ತರಬೇತಿ ನೀಡಿ, ಅಗತ್ಯ ಬಿದ್ದಲ್ಲಿ ತುರ್ತು ಸಂದರ್ಭಗಳಲ್ಲಿ ಅವರುಗಳನ್ನು ನಿಯೋಜಿಸಲಾಗುವುದು ಎಂದ ಎಸ್ಪಿ, ಕರಾವಳಿ ಕಾವಲು ಪಡೆಯ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು, ಔಷಧಿಗಳು, ಸಾಕಷ್ಟು ದಾಸ್ತಾನು ಇರುವಂತೆ ಹಾಗೂ ವೈದ್ಯರು ಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗುವುದು. ಯಾವುದೇ ಅನಾಹುತ ಅಥವಾ ತೊಂದರೆಗಳಾದ್ದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂ ನಂಬರ್‌ಗೆ ಮಾಹಿತಿ ನೀಡಬೇಕು ಎಂದ ಡಾ.ಅರುಣ್, ಜಿಲ್ಲೆಯಲ್ಲಿ ಡ್ರೋನ್‌ಗಳ ಬಳಕೆ ಮಾಡುವಂತಿಲ್ಲ ಎಂದರು.
ಜಿಲ್ಲಾಡಳಿತದಿಂದ ಹೊರತುಪಡಿಸಿ, ಮತ್ತಿತರ ಕಡೆಗಳಿಂದ ಬರುವ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದರು.







