ಮಕ್ಕಳ ರಂಗಶಿಬಿರ ಕೊಂಡಾಟ ಕಾರ್ಯಕ್ರಮ ಸಮಾರೋಪ

ಉಡುಪಿ: ಮಕ್ಕಳು ಮಾನಸಿಕವಾಗಿ ಸದೃಢರಾದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದ್ದಾರೆ.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ ಶನಿವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಹಮ್ಮಿ ಕೊಂಡ ಮಕ್ಕಳ ರಂಗಶಿಬಿರ ಕೊಂಡಾಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಮಕ್ಕಳು ಮನೆಗೆ ಸೀಮಿತರಾಗಿ ಬಿಡುತ್ತಿದ್ದಾರೆ. ಮೊಬೈಲ್ ಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ. ಮಕ್ಕಳು ಮಾನಸಿಕವಾಗಿ ಬಲಿಷ್ಠಗೊಳ್ಳಬೇಕಾದರೆ, ಸಮಾಜದೊಂದಿಗೆ ಹೊಂದಿಕೊಳ್ಳಬೇಕಾದರೆ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದ್ದರೆ ಇಂಥ ಶಿಬಿರಗಳು ಅಗತ್ಯ ಎಂದರು.
ಪತ್ರಕರ್ತ ನಾಗರಾಜ್ ವರ್ಕಾಡಿ ಅವರು ಮಾತನಾಡಿ ಮಕ್ಕಳು ಮೊಬೈಲ್ ಮತ್ತು ಇತರ ವಿಚಾರಗಳ ಏಕತಾನತೆಯಿಂದ ಹೊರಬರಲು ಮತ್ತು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಇಂತಹ ಶಿಬಿರಗಳು ಸಹಕಾರಿ ಮತ್ತು. ಶಿಬಿರಕ್ಕೆ ಸೇರಿದ ಮಕ್ಕಳು ಉತ್ತಮ ಸಂವಹನ ಕಲೆಯ ಜೊತೆಗೆ ಏಕಾಗ್ರತೆಯನ್ನೂ ಹೆಚ್ಚಿಸಿಕೊಳ್ಳುತ್ತಾರೆ ಎಂದರು.
ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯಶೋಧರ್ ಸಾಲಿ ಯಾನ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್, ಕೊಂಡಾಟದ ನಿರ್ದೇಶಕ ಅಕ್ಷತ್ ಅಮೀನ್, ರಂಗನಿರ್ದೇಶಕ ದಿವಾಕರ ಕಟೀಲ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿರಾಜ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ರಾಧಿಕಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. 25ದಿನಗಳ ಕಾಲ ರಂಗ ಶಿಬಿರವು ನಡೆಯಿತು. ಕೊನೆಯಲ್ಲಿ ಶಿಬಿರಾರ್ಥಿಗಳಿಂದ ಝಂ ಝಂ ಆನೆ ಮತ್ತು ಪುಟ್ಟ ನಾಟಕ ಪ್ರದರ್ಶನಗೊಂಡಿತು.







