ಉಡುಪಿ ಜಿಲ್ಲೆಯಲ್ಲಿ ಕೊರಗರ ಬಗ್ಗೆ ನಿಷ್ಕಾಳಜಿ; ಐಟಿಡಿಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನಪ್ರತಿನಿಧಿಗಳು
ಜಿಲ್ಲಾ ಅಭಿವೃದ್ಧಿ ಸಮನ್ವಯ, ಉಸ್ತುವಾರಿ ಸಮಿತಿ (ದಿಶಾ) ಸಭೆ

ಉಡುಪಿ, ಮೇ 13: ಕರಾವಳಿಯ ಮೂಲನಿವಾಸಿಗಳಾದ, ಈಗಲೂ ತೀರಾ ಹಿಂದುಳಿದಿರುವ ಕೊರಗ ಜನಾಂಗದ ಕುರಿತಂತೆ, ಸರಕಾರದಿಂದ ನೀಡಲಾಗುವ ಸೌಲಭ್ಯ ಹಾಗೂ ಯೋಜನೆಗಳನ್ನು ಅವರಿಗೆ ತಲುಪಿಸಲು ನಿಷ್ಕಾಳಜಿ ತೋರುತ್ತಿರುವ ಐಟಿಡಿಪಿ ಇಲಾಖೆಯ ಧೋರಣೆಯ ಕುರಿತಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳು ಇಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಚರ್ಚೆಗೆ ಕಾರಣವಾಯಿತು.
ಸಭೆಯಲ್ಲಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕೊಲ್ಲೂರು ಗ್ರಾಮ ಪಂಚಾ ಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಗಂಗಾ ಕೊರಗ ಅವರ ಮನೆ ಧ್ವಂಸ ಪ್ರಕರಣದ ಬಳಿಕ ಕೊರಗರ ನೈಜ ಸ್ಥಿತಿಗತಿ ಎಲ್ಲರ ಗಮನಕ್ಕೆ ಬರುವಂತಾಗಿದೆ. ಅವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಇತರ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಇಲಾಖಾ ಅಧಿಕಾರಿಗಳು ಬಹುಕಾಲದಿಂದ ಹೇಳುತ್ತಾ ಬಂದಿದ್ದರೂ, ತಳಮಟ್ಟದಲ್ಲಿ ಏನೂ ಆಗುತ್ತಿಲ್ಲ. ಗಂಗಾ ಕೊರಗರಂಥ ಇನ್ನೂ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ಇವೆ ಎಂದು ಸಭೆಯ ಗಮನ ಸೆಳೆದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಪರಿಶಿಷ್ಟ ಪಂಗಡದ ಕೊರಗ ಜನಾಂಗಕ್ಕಾಗಿ ಅನೇಕ ಯೋಜನೆ ಗಳನ್ನು ಜಾರಿಗೊಳಿಸುತಿದ್ದಾರೆ. ಅಲ್ಲದೇ ಜಿಲ್ಲೆಯ ಕೆಲವೊಂದು ಸಂಸ್ಥೆಗಳು, ವ್ಯಕ್ತಿಗಳು ಕೊರಗರಿಗೆ ಮನೆ ನಿರ್ಮಾಣ ದಂಥ ಹಲವು ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸುತಿದ್ದಾರೆ. ಅಂಥ ಸಂಸ್ಥೆ, ವ್ಯಕ್ತಿಗಳ ಜೊತೆ ಇಲಾಖೆ ಎಂದೂ ಸಮಾಲೋಚನೆಗೂ ಮುಂದಾಗದಿರುವುದು ಬೇಸರದ ವಿಷಯ ಎಂದು ಕೋಟ ಹಾಗೂ ಇತರ ಶಾಸಕರು ನುಡಿದರು.
ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಜನಮನ್ ಯೋಜನೆಯಡಿ ಕೊರಗ ಸಮುದಾಯದ ವಸತಿ ನಿರ್ಮಾಣಕ್ಕೆ ಘಟಕ ವೆಚ್ಚ 3.75 ಲಕ್ಷ ರೂ.ಗಳಡಿ 308 ಮನೆಗಳು ಹಾಗೂ 4.50 ಲಕ್ಷ ರೂ.ಘಟಕ ವೆಚ್ಚದಲ್ಲಿ 100 ಮನೆಗಳು ಮಂಜೂರಾಗಿವೆ. ಕಾಮಗಾರಿ ಪ್ರಗತಿಯಲ್ಲಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ಮೊತ್ತದಲ್ಲಿ ಒಳ್ಳೆಯ ಮನೆ ನಿರ್ಮಾಣ ಸಾದ್ಯವಿಲ್ಲ. ಹೀಗಾಗಿ ದಾನಿಗಳ ನೆರವನ್ನು ಪಡೆಯಲು ಇಲಾಖೆ ಮುಂದಾಗಬೇಕು ಎಂದು ಕೋಟ ತಿಳಿಸಿದರು.
ನಾಮ ನಿರ್ದೇಶಿತ ಸದಸ್ಯ ಮುರಳಿ ಕಡೆಕಾರ್ ಈ ಸಂದರ್ಭದಲ್ಲಿ ಮಾತನಾಡಿ ಉದ್ಯಮಿ ಎಚ್.ಎಸ್. ಶೆಟ್ಟಿ ಅವರು ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾರ್ದಳ್ಳಿ ಮಂಡಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತಲಾ 14 ಲಕ್ಷ ರೂ.ನಂತೆ 14 ಮನೆಗಳನ್ನು ನಿರ್ಮಿಸಿ ಕೊರಗರಿಗೆ ಹಸ್ತಾಂತರಿಸಿ ದ್ದಾರೆ. ಇದೀಗ ಬೈಂದೂರು ತಾಲೂಕು ವ್ಯಾಪ್ತಿಯಲ್ಲೂ 14 ಕೊರಗ ಕುಟುಂಬಕ್ಕೆ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಟ್ರಸ್ಟ್ ಜಿಲ್ಲೆಯಲ್ಲಿ ಒಟ್ಟು 100 ಕುಟುಂಬಗಳನ್ನು ಕೊರಗರಿಗೆ ನೀಡುವ ಗುರಿ ಹಾಕಿ ಕೊಂಡಿದೆ. ಟ್ರಸ್ಟ್‌ನೊಂದಿಗೆ ಸೇರಿ ಇಲಾಖೆ ಅರ್ಹ ಕೊರಗರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಇಲಾಖೆ, ಶಾಸಕರು, ಜನಪ್ರತಿನಿಧಿಗಳು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓ ಹಾಗೂ ದಾನಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಗ್ರಾಪಂ ಮಟ್ಟದಲ್ಲಿ ಮನೆ ಅಗತ್ಯವಿರುವ ಅರ್ಹ ಕುಟುಂಬವನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಐಟಿಡಿಪಿ ಅಧಿಕಾರಿ ನಾರಾಯಣ ಸ್ವಾಮಿ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ಸಂಸದ ಕೋಟ ವಿವಿಧ ಇಲಾಖಾ ಅಧಿಕಾರಿ ಗಳಿಗೆ ಸೂಚನೆಗಳನ್ನು ನೀಡಿದರು.
ಗ್ರಾಮೀಣ ಭಾಗದ ಜನರಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಜಲ ಜೀವನ್ ಮಿಷನ್ ಕಾಮಗಾರಿಯ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಕೆಲವೊಂದು ಕಡೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಯಲಿರುವುದರಿಂದ ಅರಣ್ಯ ಇಲಾಖೆಯ ಒಪ್ಪಿಗೆಯನ್ನು ಪಡೆದು ಆದ್ಯತೆ ಮೇಲೆ ಕಾಮಗಾರಿ ನಡೆಸಲು ಕೋಟ ತಿಳಿಸಿದರು. ಅರಣ್ಯ ಇಲಾಖೆ ಸಹ ಈ ಸಂದರ್ಭದಲ್ಲಿ ವಿಳಂಬ ಮಾಡದೇ ಸ್ಪಂದಿಸಬೇಕೆಂದು ಸೂಚಿಸಿದರು.
ಅರಣ್ಯ ಇಲಾಖಾ ಅನುಮತಿಯ ಸಮಸ್ಯೆ ಇಲ್ಲದೆಯೂ ಬೈಂದೂರು ತಾಲೂಕಿನಲ್ಲಿ ಕುಡಿಯುವ ನೀರಿನ ಕೆಲವು ಕಾಮಗಾರಿಗಳು ದೀರ್ಘಕಾಲ ದಿಂದ ನಿಂತಿವೆ. ಇದಕ್ಕೆ ಅಧಿಕಾರಿಗಳ ನಿರಾಸಕ್ತಿಯೇ ಕಾರಣ. ಇದರಿಂದಾಗಿ ಸಾರ್ವಜನಿಕರಿಗೆ ಭಾರೀ ತೊಂದರೆಗಳಾಗುತ್ತಿವೆ ಎಂದು ಶಾಸಕ ಗಂಟಿಹೊಳೆ ದೂರಿ ದಾಗ, ಈ ಸಂಬಂಧ ತಾಲೂಕು ಪಂಚಾಯತ್‌ನ ಕಾರ್ಯ ನಿರ್ವಹಣಾಧಿಕಾರಿ ಮೇಲುಸ್ತುವಾರಿ ವಹಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಂಸದರು ತಿಳಿಸಿದರು.
ಜಿಲ್ಲೆಯಲ್ಲಿ ಕಳಪೆ ಕಾಮಗಾರಿ ಕುರಿತಂತೆ ದೂರುಗಳು ಕೇಳಿ ಬರುತ್ತಿವೆ. ಕಾಮಗಾರಿಗಳಲ್ಲಿ ಲೋಪಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿಮಾಡಲಾಗುವುದು ಎಂದವರು ಎಚ್ಚರಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ 1,412 ಕೋಟಿ ರೂ. ಅನುದಾನ ಮಂಜೂ ರಾಗಿದ್ದು, ಈಗಾಗಲೇ ಕೈಗೊಂಡಿರುವ ಹೆಬ್ರಿ, ಪರ್ಕಳ, ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಹೆದ್ದಾರಿ ಕಾಮಗಾರಿ ಗಳನ್ನು ಕೈಗೊಳ್ಳಲು ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಿ, ಪರಿಹಾರ ಹಣವನ್ನು ಸಂತ್ರಸ್ತರಿಗೆ ತ್ವರಿತವಾಗಿ ಪಾವತಿಸಿ, ಕಾಮಗಾರಿಯ ವೇಗ ಹೆಚ್ಚಿಸಬೇಕು ಎಂದು ಕೋಟ ತಿಳಿಸಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಹೆಜಮಾಡಿ ಬಂದರು ಕಾಮಗಾರಿಯ ವೇಗ ಹೆಚ್ಚಿಸಬೇಕು. ಭೂಸ್ವಾಧೀನ ಪರಿಹಾರಧನವನ್ನು ಜನರಿಗೆ ಆದಷ್ಟು ಬೇಗ ವಿತರಿಸಬೇಕು. ಕಾಮಗಾರಿ ವಿವರಗಳನ್ನು ಜನಪ್ರತಿನಿಧಿ ಗಳಿಗೆ ನೀಡಬೇಕು. ಹಂಗಾರಕಟ್ಟೆ, ಗಂಗೊಳ್ಳಿ ಹಾಗೂ ಮರವಂತೆಯಲ್ಲಿ ಕೋಸ್ಟಲ್ ಬರ್ತ್ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹೊರಬಂದರು ವಿಸ್ತರಣಾ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಶಾಶ್ವತ ಕಾಮಗಾರಿಗಳನ್ನು ಸೃಜನಿಸಲು ಅವಕಾಶವಿದ್ದು, ಜಿಲ್ಲೆಯಲ್ಲಿ ಇದರ ಪ್ರಗತಿ ಹೆಚ್ಚಿಸಬೇಕು ಎಂದ ಕೋಟ, ಇದೀಗ ಈ ಯೋಜನೆಯಡಿ ಕಾಲುಸಂಕ ನಿರ್ಮಿಸಲು ಸಹ ಅವಕಾಶವಿದ್ದು, ಇದರ ಸದುಪ ಯೋಗ ಪಡಿಸಿಕೊಂಡು ಕರಾವಳಿ ಭಾಗಗಳಲ್ಲಿ ಅಗತ್ಯರುವೆಡೆ ಕಾಲುಸಂಕ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







