ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಆರೋಗ್ಯಾಧಿಕಾರಿ ಮಾಹಿತಿ
ಡೆಂಗ್ಯು, ಮಲೇರಿಯಾ: ವಲಸೆ ಕಾರ್ಮಿಕರ ಬಗ್ಗೆ ಹೆಚ್ಚಿನ ನಿಗಾ

ಉಡುಪಿ, ಮೇ 14: ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭ ವಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ನಿಯಂತ್ರಣದ ಕುರಿತು ಮನೆಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದೆ. ಈ ಸಂಬಂಧ ನಗರ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅವರಲ್ಲಿ ಒಬ್ಬರಿಗೆ ಮಲೇರಿಯಾ, ಡೆಂಗ್ಯುನಂತಹ ಕಾಯಿಲೆಗಳು ಬಂದರೆ ಬಹು ಬೇಗನೆ ಎಲ್ಲರಿಗೂ ಹರಡುವ ಸಾಧ್ಯತೆ ಇದೆ. ಆದುದರಿಂದ ರೋಗದ ಲಕ್ಷ್ಮಣ ಕಂಡುಬರುವ ಕಾರ್ಮಿಕರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯ ತಿಳಿಸಿದ್ದಾರೆ.
ಉಡುಪಿ ತಾಪಂ ಆಡಳಿತಾಧಿಕಾರಿ ಯಾಗಿರುವ ಉಡುಪಿ ಭೂ ಕಂದಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣ ದಲ್ಲಿ ಬುಧವಾರ ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಮಳೆ ಹಾಗೂ ನೆರೆಯ ಹಿನ್ನೆಲೆಯಲ್ಲಿ ಇಲಾಖೆಯಿಂದ ಕ್ರಿಯಾ ಯೋಜನೆ ಯನ್ನು ತಯಾರಿಸಲಾಗಿದ್ದು, ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ಕಳೆದ ವರ್ಷ ಉಡುಪಿ ತಾಲೂಕಿನಲ್ಲಿ 390 ಡೆಂಗ್ಯು ಪ್ರಕರಣ ಗಳು ವರದಿ ಯಾಗಿದ್ದವು. ಈ ವರ್ಷ ಕೂಡ ಅಷ್ಟೇ ಮಟ್ಟದಲ್ಲಿ ಕಂಡುಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ನೆರೆಯಿಂದಾಗಿ ವಾಂತಿಬೇಧಿಯಂತಹ ಕಾಯಿಲೆಗಳು ಕಂಡುಬರುವುದರಿಂದ ಆರೋಗ್ಯ ಕಾರ್ಯಕರ್ತರನ್ನು ಸಜ್ಜು ಮಾಡಲಾಗಿದೆ ಎಂದರು.
ವಸತಿ ಯೋಜನೆಯ ನೋಡಲ್ ಅಧಿಕಾರಿ ಅಶೋಕ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿ ಪ್ರತಿ ಗ್ರಾಪಂ ಮಟ್ಟದಲ್ಲಿ ಒಬ್ಬ ಸರ್ವೆಯರ್‌ನ್ನು ನಿಯೋಜಿಸಲಾಗಿದೆ. ಈ ಯೋಜನೆಯಲ್ಲಿ ಎಸ್ಸಿಎಸ್ಟಿ ಗಳಿಗೆ 1.75ಲಕ್ಷ ರೂ. ನೀಡಲಾಗುತ್ತದೆ. ನರೇಗಾ ಯೋಜನೆಯಲ್ಲಿ 30 ದಿನಗಳ ಕೆಲಸಕ್ಕೆ ಅವಕಾಶ ಇದ್ದು, ಇದರಲ್ಲಿ 33ಸಾವಿರ ರೂ. ದೊರೆಯುತ್ತದೆ. ನರೇಗಾಕ್ಕೆ ಜಾಬ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಒಟ್ಟು 5ವರ್ಷದ ಯೋಜನೆ ಇದಾಗಿದೆ. ಸಾಮಾನ್ಯ ಜನರಿಗೆ 1.20ಲಕ್ಷ ರೂ. ಬಿಡುಗಡೆಯಾಗುತ್ತದೆ. ಮಾರ್ಚ್‌ನಿಂದ ಸಮೀಕ್ಷೆ ಆರಂಭವಾಗಿದ್ದು, ಮೇ 15 ಕೊನೆಯ ದಿನವಾಗಿದೆ. ಸಾರ್ವಜನಿಕರು ಕೂಡ ಆ್ಯಪ್ ಮೂಲಕ ಸಮೀಕ್ಷೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಉಡುಪಿ ವಿಭಾಗದ ಇಂಜಿನಿಯರ್ ಮಂಜುನಾಥ್ ಮಾತನಾಡಿ, ಇಲಾಖೆಗೆ ಸಂಬಂಧಿಸಿ ಎಲ್ಲ ಕಾಮಗಾರಿಗಳನ್ನು ಮಳೆಗಾಲಕ್ಕೆ ಮೊದಲು ಪೂರ್ಣಗೊಳಿಸಲಾಗುವುದು. ಬ್ರಹ್ಮಾವರ ತಾಲೂಕಿನ ಉಪ್ಪೂರು ಹಾಗೂ ನಾಲ್ಕೂರು ಗ್ರಾಮದಲ್ಲಿ ಕಾಲುಸಂಕ ಕಾಮಗಾರಿ ಪೂರ್ಣ ಗೊಳಿಸಲಾಗಿದೆ. ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ರಸ್ತೆ ಚರಂಡಿಗಳ ಹೂಳು ತೆಗೆಯುವುದು ಮತ್ತು ಸೇತುವೆ ಶುಚಿಗೊಳಿಸುವ ಕಾರ್ಯ ಮಾಡ ಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಾಕಷ್ಟು ಬಿತ್ತನೆಬೀಜ, ರಸಗೊಬ್ಬರ ದಾಸ್ತಾನು
ಉಡುಪಿ ತಾಲೂಕಿನಲ್ಲಿ 470 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ನಮ್ಮಲ್ಲಿ 650 ಕ್ವಿಂಟಾಲ್ ದಾಸ್ತಾನು ಇದೆ. ಅದನ್ನು ರೈತರ ಸಂಪರ್ಕ ಕೇಂದ್ರದ ಮೂಲಕ ವಿತರಿಸಲಾಗುತ್ತದೆ. ಅದೇ ರೀತಿ ಕೃಷಿ ಸುಣ್ಣ ಸೇರಿದಂತೆ ಎಲ್ಲ ರೀತಿಯ ಪರಿಕರಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ. ರಸಗೊಬ್ಬರ ದಾಸ್ತಾನು ಸಾಕಷ್ಟು ಇರುವುದರಿಂದ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜನವರಿ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ಪಾವತಿಯಾಗಿದ್ದು, ಫೆಬ್ರವರಿ ತಿಂಗಳ ಹಣ ಬರಲು ಬಾಕಿ ಇದೆ. 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಅವರ ಖಾತೆಗೆ ಹಣ ಬಂದಿಜದ್ದು, 490 7-8 ಫಲಾನುಭವಿಗಳ ಹಣ ತಾಂತ್ರಿಕ ಕಾರಣದಿಂದ ಬಾಕಿ ಇದೆ. ಅರ್ಹರ ಖಾತೆಗೆ ಹಣ ಬಂದಿದೆ. 2007-08ಸಾಲಿನ ಹಣ ಬಿಡುಗಡೆಯಾಗುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಾಲೂಕು ಶಿಶು ಕಲ್ಯಾಣಾಧಿಕಾರಿ ಸಭೆಗೆ ತಿಳಿಸಿದರು.







