ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿ ಸಮಸ್ಯೆಗಳ ಬಗ್ಗೆ ಉಡುಪಿ ಡಿಸಿ ಜೊತೆ ಚರ್ಚೆ

ಉಡುಪಿ, ಮೇ 14: ನಗರ ಹಾಗೂ ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಸಂಬಂದಿತ ವಿವಿಧ ಸಮಸ್ಯೆಗಳ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಸ್ಥಳೀಯ ಯೋಜನ ಪ್ರದೇಶದ ಹೊರಭಾಗದಲ್ಲಿನ ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶ ಮತ್ತು ಎಕನಿವೇಶನ ವಸತಿ/ವಸತಿಯೇತರ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ಯನ್ನು ಈ ಹಿಂದೆ ಗ್ರಾಪಂ ಹಾಗೂ ತಾಪಂಗಳಲ್ಲಿ ಅನುಮೋದನೆಯನ್ನು ನೀಡಲಾಗುತ್ತಿತ್ತು. 2024ರಿಂದ ಈ ಅಧಿಕಾರವನ್ನು ನಗರ ಗ್ರಾಮಾಂತರ ಯೋಜನಾ ಇಲಾಖೆಗೆ ನೀಡಿದ್ದರಿಮದ ಸಾರ್ವಜನಿಕರಿಗೆ ಸಕಾಲದಲ್ಲಿ ವಿನ್ಯಾಸ ಅನುಮೋದನೆಯನ್ನು ಪಡೆಯಲಾಗುತ್ತಿಲ್ಲ. ಇದರಿಂದಾಗಿ 9/11ಎ ಅನ್ನು ಪಡೆ ಯಲು ವಿಳಂಬ ವಾಗುತ್ತಿದೆ ಎಂದು ಶಾಸಕರು ದೂರಿದರು.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ವಹಿಸಿರುವುದರಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿಂದ ವಿನ್ಯಾಸ ಅನುಮೋದನೆಯನ್ನು ಪಡೆಯಲು ಕನಿಷ್ಠ 2 -3 ತಿಂಗಳು ಬೇಕಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಈ ಹಿಂದೆ ಗ್ರಾಮ ಹಾಗೂ ತಾಪಂನಲ್ಲಿ 15 ದಿನದ ವಿನ್ಯಾಸ ಅನುಮೋದನೆಯೊಂದಿಗೆ 9/11ಎ ಅನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿ ಪಡೆಯಲು ಸಾದ್ಯವಾಗುತ್ತಿತ್ತು ಎಂದು ಅವರು ತಿಳಿಸಿದರು.
ಅತೀ ದೂರದ ಗ್ರಾಮೀಣ ಪ್ರದೇಶಗಳಿಗೆ ಸಕಾಲದಲ್ಲಿ ಕ್ಷೇತ್ರ ಭೇಟಿ ನೀಡಲು ನಗರ ಹಾಗೂ ಗ್ರಾಮಾಂತರ ಯೋಜನ ಪ್ರಾಧಿಕಾರಿಗಳ ಅಧಿಕಾರಿಗಳಿಗೆ ಸಾದ್ಯವಾಗದೇ ಇದ್ದು, ಅಲ್ಲದೆ ದಾಖಲೆಗಳ ನೆಪವೊಡ್ಡಿ ಕಡತಗಳ ವಿಲೆವಾರಿ ಯಲ್ಲಿ ವಿಳಂಬತೆಯನ್ನು ತೋರುತ್ತಿರುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಪ್ರತಿ ನಿತ್ಯ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ ಎಂದರು.
ಕಾಪು ತಾಲೂಕು ವ್ಯಾಪ್ತಿಯಲ್ಲಿ 16 ಗ್ರಾಪಂಗಳು ಇದ್ದು ಈ ಗ್ರಾಪಂಗೆ ಸಂಬಂಧಿಸಿದಂತೆ ಸಾಕಷ್ಟು ಕಡತ ಗಳು ಕಾಪು ಯೋಜನ ಪ್ರಾಧಿಕಾರದಲ್ಲಿ ವಿನ್ಯಾಸ ಅನುಮೋದನೆ ಅವಶ್ಯಕತೆಯಿದ್ದು ಸದಸ್ಯ ಕಾರ್ಯ ದರ್ಶಿರವರಿಗೆ ಕಾಪು ತಾಲೂಕು ಅಲ್ಲದೆ ಕಾರ್ಕಳ ಹಾಗೂ ಬಂಟ್ವಾಳ ತಾಲೂಕಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದ್ದರಿಂದ ಕಾಪು ತಾಲೂಕು ವ್ಯಾಪ್ತಿಯಲ್ಲಿನ ಏಕ ವಿನ್ಯಾಸ ಕಡತಗಳು ಸುಮಾರು 3 ತಿಂಗಳವರೆಗೆ ವಿಲೇವಾರಿಯಾಗದೇ ಬಾಕಿ ಉಳಿದಿದೆ. ಇದರಿಂದ 9/11ಎ ಅನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ವಿನ್ಯಾಸ ಅನುಮೋದನೆಯ ಸಂದರ್ಭದಲ್ಲಿ ನಿವೇಶನ ಭೂಪರಿವರ್ತನೆ ಯಾಗಿದ್ದರೂ ಪ್ರಾಧಿಕಾರದ ನಿಯಮ ದಂತೆ ರಸ್ತೆಯನ್ನು ಭೂ ಪರಿವರ್ತನೆ ಮಾಡಿ ಪುರಸಭೆ ಹಾಗೂ ಗ್ರಾಪಂಗಳಿಗೆ ಪಾರಾಧೀನ ಮಾಡುವಂತೆ ಹಾಗೂ ಗ್ರಾಮಾಂತರದಲ್ಲಿ ರಸ್ತೆಯ ಮಧ್ಯಭಾಗದಿಂದ 25 ಮೀಟರ್ ಬಿಟ್ಟು ಕಟ್ಟಡವನ್ನು ನಿರ್ಮಿಸಲು ಕಡ್ಡಾಯಗೊಳಿಸಿದ್ದರಿಂದ ತುಂಡು ಭೂಮಿಯನ್ನು ಹೊಂದಿ ದ್ದವರಿಗೆ ಇದರಿಂದ ಕಷ್ಟವಾ ಗುತ್ತಿದೆ. ಇದನ್ನು ಸರಳೀಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.







