ಬ್ಲ್ಯಾಕ್‌ಸ್ಪಾಟ್ ಪ್ರದೇಶಗಳಲ್ಲಿ ವೈಜ್ಞಾನಿಕ ಕಾಮಗಾರಿಗೆ ಆದ್ಯತೆ ನೀಡಿ: ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಮೇ 14: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಾಯಕಾರಿ ಬ್ಲ್ಯಾಕ್‌ಸ್ಪಾಟ್ ಪ್ರದೇಶಗಳಲ್ಲಿ ವಾಹನಗಳ ಸುರಕ್ಷಿತ ಚಾಲನೆಗೆ ಅಗತ್ಯವಿರುವ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಆದ್ಯತೆಯ ಮೇಲೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇಂಥ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ಹಂಪ್ಸ್‌ಗಳ ಅಳವಡಿಕೆ, ಸೂಚನಾ ಫಲಕ ಸೇರಿದಂತೆ ಇತರ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳಾಗಿ ಸಾವು-ನೋವುಗಳು ಸಂಭವಿಸದಂತೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮ, ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಲ್ಲಲ್ಲಿ ರಸ್ತೆ ಸೂಚನಾ ಫಲಕ ಗಳನ್ನು ಅಳವಡಿಸಿ, ರಸ್ತೆ ಅಪಘಾತ ಪ್ರಕರಣ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸ ಬೇಕು. ವಾಹನಗಳು ಪ್ರಾಧಿಕಾರ ನಿಗದಿಪಡಿಸಿರುವ ವೇಗದ ಮಿತಿಯೊಳಗೆ ಸಂಚರಿಸಿದಲ್ಲಿ ಸುಗಮವಾಗಿ ಹಾಗೂ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗುತ್ತದೆ. ಇದಕ್ಕೆ ವಿಶೇಷ ಒತ್ತು ನೀಡಬೇಕು ಎಂದರು.
82 ಮಂದಿಯ ಪರವಾನಿಗೆ ಅಮಾನತು: ಜಿಲ್ಲೆಯಲ್ಲಿ ಅತೀ ವೇಗ, ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಯಿಂದ ವಾಹನವನ್ನು ಚಲಾಯಿಸಿ ರಸ್ತೆ ಅಪಘಾತಕ್ಕೆ ಕಾರಣರಾದ 82 ಮಂದಿ ಆರೋಪಿಗಳ ಚಾಲನ ಪರವಾನಿಗೆ (ಡ್ರೈವಿಂಗ್ ಲೈಸನ್ಸ್)ಯನ್ನು ಆರು ತಿಂಗಳ ಅವಧಿಗೆ ಅಮಾನತು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಿ ಬಸ್‌ಗಳನ್ನು ಅತೀ ವೇಗವಾಗಿ ಚಾಲನೆ ಮಾಡುವುದರ ಜೊತೆಗೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಅಪಘಾತ ಸಂಭವಿಸುವುದಲ್ಲದೇ, ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಉಡುಪಿ ನಗರವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲು ನಿಯಮವಿದ್ದರೂ ಸಹ ಈ ನಿಯಮಗಳನ್ನು ಗಾಳಿಗೆ ತೂರಿ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ಯಮಗಳಿಗೆ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಗ್ರಾಹಕರು, ಉದ್ಯಮಿಗಳು ತಮ್ಮ ವಾಹನಗಳನ್ನು ರಸ್ತೆಯಲ್ಲೇ ಪಾರ್ಕ್ ಮಾಡುತ್ತಿರುವ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದರು.
5 ಜಂಕ್ಷನ್‌ಗಳಲ್ಲಿ ಸಿಗ್ನಲ್‌ಲೈಟ್: ಉಡುಪಿ ನಗರಸಭಾ ವ್ಯಾಪ್ತಿಯ ಐದು ಜಂಕ್ಷನ್‌ಗಳಲ್ಲಿ ಸಿಗ್ನಲ್‌ಲೈಟ್ ಗಳು ಅಳವಡಿಸಲು ಕಳೆದ ಸಭೆಯಲ್ಲಿಯೇ ತೀರ್ಮಾನಿಸಲಾಗಿತ್ತು. ಆದರೂ ಈವರೆಗೆ ಅದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ತೀವ್ರವಾದ ಅಸಮಾಧಾನ ಹಾಗೂ ಆಕ್ಷೇಪಣೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕಲ್ಸಂಕ ಹಾಗೂ ಅಂಬಲ್ಪಾಡಿ ಜಂಕ್ಷನ್‌ಗಳಲ್ಲಿ ಸಿಗ್ನಲ್‌ಲೈಟ್ ಕೂಡಲೇ ಅಳವಡಿಸುವಂತೆ ತಿಳಿಸಿದರು.
ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಡಿ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಕಾಮಗಾರಿಗಳ ಅನುಷ್ಠ್ಠಾನ ಇನ್ನೂ ಸಹ ಆಗಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಜರಗಿಸುವಂತೆ ಅವರು ಸೂಚಿಸಿದರು.
ರಸ್ತೆ ಅಪಘಾತದ ಹಿಟ್ ಆ್ಯಂಡ್ ರನ್ ಕೇಸ್‌ಗಳಲ್ಲಿ ಮೃತಪಟ್ಟ ಕುಟುಂಬದ ಅವಲಂಬಿತರು ಹಾಗೂ ಗಾಯ ಗೊಂಡವರು ಸೊಲೊಟಿಯಂ ಪರಿಹಾರ ಪಡೆಯಲು ಅರ್ಹರಿದ್ದು, ಎಲ್ಲಾ ಪ್ರಕರಣಗಳಲ್ಲಿಯೂ ಪರಿಹಾರ ವನ್ನು ಕೂಡಲೇ ನಿಯಮಾನುಸಾರ ಮಂಜೂರು ಮಾಡುವಂತೆ ತಾಲೂಕು ತಹಶೀಲ್ದಾರರು ಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಎಎಸ್ಪಿ ಪರಮೇಶ್ವರ್ ಹೆಗಡೆ, ಡಿಎಫ್‌ಒ ಗಣಪತಿ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಹಾಗೂ ಇತರರು ಉಪಸ್ಥಿತರಿದ್ದರು.
ಅಟೋ ಚಾಲಕರಿಂದ ಹಣ ವಸೂಲಿ ದೂರು
ಆಟೋರಿಕ್ಷಾ ಚಾಲಕರು ಉಡುಪಿ ನಿಲ್ದಾಣ ವ್ಯಾಪ್ತಿಯಲ್ಲಿ ಬರುವ ಆಟೋ ನಿಲ್ದಾಣಗಳಲ್ಲಿ ತಮ್ಮ ವಾಹನ ನಿಲ್ಲಿಸಲು, ಆಟೋ ನಿಲ್ದಾಣದ ಸದಸ್ಯತ್ವ ಪಡೆಯಲು 40 ಸಾವಿರ ರೂ. ಗಳಿಂದ ಹಿಡಿದು ಒಂದು ಲಕ್ಷದ ವರೆಗೆ ಪಾವತಿ ಮಾಡಬೇಕು ಎಂದು ಹೇಳಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.
ಆಟೋ ನಿಲ್ದಾಣದ ಸ್ಥಳಗಳು ಸರಕಾರದ ಸ್ವತ್ತಾಗಿದ್ದು, ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿದೆ. ಈ ರೀತಿ ಅನಗತ್ಯವಾಗಿ ಹಣ ವಸೂಲಾತಿಯನ್ನು ಯಾರೊಬ್ಬರೂ ಸಹ ಮಾಡುವ ಹಾಗಿಲ್ಲ. ಆಟೋ ನಿಲ್ದಾಣಗಳಲ್ಲಿ ಎಲ್ಲಾ ಆಟೋಗಳು ಸರದಿಯ ಆಧಾರದ ಮೇಲೆ ನಿಂತು ಪ್ರಯಾಣಿಸಲು ಅವಕಾಶ ಮಾಡಿ ಕೊಡಬೇಕು. ಈ ಬಗ್ಗೆ ನಗರಸಭಾ ಆಯುಕ್ತರು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸೂಚನೆ ನೀಡಿದರು.
ಪಾರ್ಕಿಂಗ್: ಮಾಲಕರ ವಿರುದ್ಧ ಕ್ರಮಕ್ಕೆ ಸೂಚನೆ
ಉಡುಪಿ ನಗರವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲು ನಿಯಮವಿದ್ದರೂ ಸಹ ಈ ನಿಯಮಗಳನ್ನು ಗಾಳಿಗೆ ತೂರಿ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ಯಮಗಳಿಗೆ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಗ್ರಾಹಕರು, ಉದ್ಯಮಿಗಳು ತಮ್ಮ ವಾಹನಗಳನ್ನು ರಸ್ತೆಯಲ್ಲೇ ಪಾರ್ಕ್ ಮಾಡುತ್ತಿರುವ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು ಡಿಸಿ ನುಡಿದರು.
ಈ ಬಗ್ಗೆ ಈಗಾಗಲೇ ಕೆಲವು ಮಾಲಕರಿಗೆ ನೋಟೀಸ್ ಜಾರಿ ಮಾಡಿದ್ದರೂ ಸಹ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಅವರಿಗೆ ಅಂತಿಮ ನೋಟೀಸ್‌ನ್ನು ನೀಡಿ ನಿಯಮಾನುಸಾರ ಕಾನೂನಿನ ಅಡಿ ಕ್ರಮ ಕೈಗೊಳ್ಳ ಬೇಕು ಎಂದು ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು.